
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಸೋಮವಾರ (ಆಗಸ್ಟ್ 30) ನಡೆದ ಏಷ್ಯನ್ ಯೂತ್ ಬಾಕ್ಸಿಂಗ್‌ನಲ್ಲಿ ಭಾರತದ ಬಾಕ್ಸರ್‌ಗಳು ಮೂರು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಯೂತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ವಿಶ್ವಮಿತ್ರ ಚೊಂಗತಮ್ (51 ಕೆಜಿ ವಿಭಾಗ), ವಿಶಾಲ್ (80 ಕೆಜಿ ವಿಭಾಗ) ಮತ್ತು ನೇಹಾ (54 ಕೆಜಿ ವಿಭಾಗ) ಬಂಗಾರದ ಪದಕ ಗೆದ್ದಿದ್ದಾರೆ.
ಇದೇ ಏಷ್ಯನ್ ಯೂತ್ ಬಾಕ್ಸಿಂಗ್‌ನಲ್ಲಿ ಭಾರತದ ಆರು ಬಾಕ್ಸರ್‌ಗಳು ಬೆಳ್ಳಿ ಪದಕ ಜಯಿಸಿದ್ದಾರೆ. ವಿಶ್ವಮಿತ್ರ ಚೊಂಗತಮ್ ಅವರು 51 ಕೆಜಿ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಉಜ್ಬೇಕಿಸ್ತಾನ್‌ನ ಕುಜಿಬೋವ್ ಅಹ್ಮದ್ಜಾನ್ ಅವರನ್ನು 4-1ರ ಅಂತರದಿಂದ ಚಿನ್ನ ಗೆದ್ದರು.
ಮತ್ತೊಂದು ಪಂದ್ಯದಲ್ಲಿ ಪುರುಷರ 80 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶಾಲ್, ಕಿರ್ಗಿಸ್ತಾನ್ ನ ಅಕ್ಮಾಟೋವ್ ಸಾಂಝಾ ಅವರನ್ನು 5-0ಯಿಂದ ಸೋಲಿಸಿ ಬಂಗಾರ ಜಯಿಸಿದ್ದಾರೆ. ಇಬ್ಬರಲ್ಲಿ ನೇಹಾ ಅವರ ಪಂದ್ಯ ಜಿದ್ದಾ-ಜಿದ್ದಿಯಿಂದ ಕೂಡಿತ್ತು. ಕಝಕ್‌ಸ್ತಾನ್‌ನ ಐಶಾಗುಲ್ ಎಲೆಬಯೆವಾ ಎದುರಿನ ರೋಚಕ ಹಣಾಹಣಿಯಲ್ಲಿ ನೇಹಾ 3-2ರ ಗೆಲುವಿನೊಂದಿಗೆ ಚಿನ್ನ ತನ್ನದಾಗಿಸಿಕೊಂಡಿದ್ದಾರೆ.
ಈ ಹಿಂದೆ 2010ರಲ್ಲಿ ನಡೆದಿದ್ದ ಬಾಕ್ಸಿಂಗ್ ವೇಳೆ ಪುರುಷರ ವಿಭಾಗದಲ್ಲಿ ಭಾರತಕ್ಕೆ ಎರಡು ಬಂಗಾರದ ಪದಕಗಳು ಬಂದಿದ್ದವು. ಇನ್ನು 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವನಾಥ್ ಸುರೇಶ್, 63.5 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಂಶಜ್, 71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಯದೀಪ್ ರಾವತ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳಾ ವಿಭಾಗದಲ್ಲಿ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿವೇದಿತಾ, 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ತಮನ್ನಾ, 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಿಮ್ರನ್ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.