ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ 3ನೇ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್!

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ ಲಭಿಸಿದೆ. ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ಸೆಮಿಫೈನಲ್-1 ಪಂದ್ಯದಲ್ಲಿ ಟರ್ಕಿಯ ಬಾಕ್ಸರ್ ಬುಸೆನಾಜ್ ಸರ್ಮೆನೆಲಿ ಎದುರು ಲವ್ಲಿನಾ 0-5ರ ಸೋಲಿನೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಪರ್ಧೆ ಮುಗಿಸಿದ್ದಾರೆ. ಆದರೆ ಭಾರತಕ್ಕೆ ಮೂರನೇ ಪದಕದ ಸಂಭ್ರಮ ಸಿಕ್ಕಿದೆ.
ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಕಂಚಿನ ಪದಕ ಗ್ಯಾರಂಟಿಯಾಗಿತ್ತು. ಸೆಮಿಫೈನಲ್‌ನಲ್ಲಿ ಲವ್ಲಿನಾ ಗೆದ್ದಿದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶವಿತ್ತು.

ಲವ್ಲಿನಾ ಬೊರ್ಗೊಹೈನ್ ಪ್ರಮುಖ ಮಾಹಿತಿ
ಒಲಿಂಪಿಕ್ಸ್ ಇತಿಹಾಸದಲ್ಲೇ ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಖಾತ್ರಿಯಾಗುತ್ತಿರುವುದು ಇದು ಬಲು ಅಪರೂಪ. 23ರ ಹರೆಯದ ಅಸ್ಸಾಂ ಹುಡುಗಿ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಪ್ರವೇಶಿಸುತ್ತಲೇ ದೇಶಕ್ಕೆ ಎರಡನೇ ಪದಕ ಖಾತ್ರಿಯಾಗಿತ್ತು. ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ನಲ್ಲಿ ಯಾರೇ ಸೋತರೂ ಕಂಚಿನ ಪದಕವಂತೂ ಸಿಗಲಿದೆ. ಹೀಗಾಗಿ ಲವ್ಲಿನಾಗೆ ಸೆಮಿಫೈನಲ್ ಫಲಿತಾಂಶಕ್ಕೂ ಮುನ್ನವೇ ಪದಕ ಖಾತ್ರಿಯಾಗಿತ್ತು. ಸೆಮಿಫೈನಲ್‌ನಲ್ಲಿ ಲವ್ಲಿನಾ ಗೆದ್ದಿದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಸಿಗುತ್ತಿತ್ತು. ಅಂದರೆ ಲವ್ಲಿನಾಗೆ ಫೈನಲ್‌ಗೇರಲು ಅವಕಾಶವಿತ್ತು. ಆದರೆ ಲವ್ಲಿನಾ ಅವರು ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತಕ್ಕೆ ಪದಕದ ನಿರೀಕ್ಷೆ ಮೂಡಿಸಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರು 51 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದರು. ಕೊಲಂಬಿಯಾದ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ ಕೋಮ್ 3-2ರ ಅಂತರದಲ್ಲಿ ಪರಾಭವಗೊಂಡಿದ್ದರು.

ಭಾರತಕ್ಕೆ ಒಟ್ಟು ಮೂರು ಪದಕಗಳು
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಈಗ ಲವ್ಲಿನಾ ಭಾರಕ್ಕೆ ಮತ್ತೊಂದು ಕಂಚಿನ ಮೆರಗು ತಂದಿದ್ದಾರೆ. ಇಲ್ಲಿಗೆ ಭಾರತಕ್ಕೆ ಒಟ್ಟು ಮೂರು ಪಕದಗಳು ಲಭಿಸಿದಂತಾಗಿವೆ. 4 ಆಗಸ್ಟ್ 12 PM ವೇಳೆ ಭಾರತದ ಖಾತೆಯಲ್ಲಿ ಒಂದು ಬೆಳ್ಳಿ, ಎರಡು ಕಂಚಿನ ಪದಕಗಳು ಇದ್ದವು. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾಗೆ ಪದಕ ಸಿಗುವ ನಿರೀಕ್ಷೆಯಿದೆ. ಗ್ರೂಪ್ ಹಂತದಲ್ಲಿ ಚೋಪ್ರಾ ಫೈನಲ್‌ಗೆ ಆಯ್ಕೆಯಾಗಿದ್ದು, ಆಗಸ್ಟ್ 7ರಂದು 4.30 PMಗೆ ಜಾವೆಲಿನ್ ಥ್ರೋ ಫೈನಲ್ ಪಂದ್ಯ ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಪದಕಗಳ ದಾಖಲೆ
ಟೋಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿರುವ ಲವ್ಲಿನಾ ಬೊರ್ಗೊಹೈನ್ ಅವರು ಇತಿಹಾಸ ಪುಟ ಸೇರಿದ್ದಾರೆ. ಭಾರತೀಯ ಒಲಿಂಪಿಕ್ಸ್ ಇತಿಹಾಸದಲ್ಲೇ ಲವ್ಲಿನಾ ಬೊರ್ಗೊಹೈನ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಯಾಕೆಂದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತೀಯರ ಪರ ಪದಕ ಗೆದ್ದಿರುವುದು ಕೇವಲ ಮೂರು ಮಂದಿ ಮಾತ್ರ. ಈ ಮೊದಲು ಬರೀ ಇಬ್ಬರಷ್ಟೇ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದರು. ಅವರೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಜೇಂಜರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಕೂಡ ಕಂಚಿನ ಪದಕ ಗೆದ್ದಿದ್ದರು. ಈಗ ಲವ್ಲಿನಾ ಕೂಡ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಲವ್ಲಿನಾ ಕಂಚಿಗೆ ಹೊರತಾಗಿ ಬೇರೆ ಪದಕ ಗೆದ್ದಿದ್ದರೆ ಅದೂ ಕೂಡ ಹೊಸ ದಾಖಲೆಯಾಗಿ ಗುರುತಿಸಿಕೊಳ್ಳಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications