ARNA ಬಿಯರ್ ಕಂಪನಿಯಿಂದ ಬಂಪರ್ ಆಫರ್!; ನೇಪಾಳದ ಯಾವ ಆಟಗಾರ ಆಗಲಿದ್ದಾನೆ ಕೋಟ್ಯಧಿಪತಿ?
ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ 2023ರ ಏಷ್ಯಾ ಕಪ್ ಪಂದ್ಯಾವಳಿಯ 5ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೇಪಾಳ ತಂಡವು ಬಲಿಷ್ಠ ಭಾರತ ತಂಡವನ್ನು ಎದುರಿಸುತ್ತಿದೆ.
ಇಂದಿನ ಪಂದ್ಯ ಉಭಯ ತಂಡಗಳ ನಡುವಿನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲಿದೆ. ಸದ್ಯ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತ ಏಕದಿನ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದ್ದರೆ, ನೇಪಾಳ 15ನೆ ಸ್ಥಾನದಲ್ಲಿದೆ.

ಇನ್ನು ಬಲಾಢ್ಯ ಭಾರತ ತಂಡದ ವಿರುದ್ಧ ಆಡಲು ನೇಪಾಳ ಆಟಗಾರರು ಎದುರು ನೋಡುತ್ತಿದ್ದಾರೆ. ಉತ್ತಮ ಕ್ರಿಕೆಟ್ ಆಡುವುದಾಗಿ ತಂಡದ ನಾಯಕ ರೋಹಿತ್ ಪೌಡೆಲ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಎದುರಿಸುತ್ತಿರುವ ನೇಪಾಳ ಕ್ರಿಕೆಟ್ ತಂಡದ ಆಟಗಾರರಿಗೆ, ಅಲ್ಲಿನ ARNA ಬಿಯರ್ ಕಂಪನಿಯು ಭರ್ಜರಿ ಆಫರ್ ನೀಡಿದೆ.
ನೇಪಾಳದ ARNA ಬಿಯರ್ ಕಂಪನಿಯು ತಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡವು ಭಾರತದ ವಿರುದ್ಧ ಐತಿಹಾಸಿಕ ಪಂದ್ಯವನ್ನು ಆಡಲಿರುವ ಕಾರಣ ಈ ಆಫರ್ ನೀಡುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸುತ್ತಿದೆ.
ARNA ಬಿಯರ್ ಕಂಪನಿ ನೀಡಿದ ಆಫರ್ ಏನೆಂದರೆ,
* ಭಾರತ ತಂಡದ ವಿಕೆಟ್ ಪಡೆಯುವ ನೇಪಾಳ ಆಟಗಾರರಿಗೆ ಪ್ರತಿ ವಿಕೆಟ್‌ಗೆ 1 ಲಕ್ಷ ರೂಪಾಯಿ ನೀಡಲಿದೆ.
* ನೇಪಾಳ ಆಟಗಾರರು ಬ್ಯಾಟಿಂಗ್‌ನಲ್ಲಿ ಪ್ರತಿ ಸಿಕ್ಸ್‌ಗೆ 1 ಲಕ್ಷ ರೂಪಾಯಿ ಪಡೆಯಬಹುದಾಗಿದೆ.
* ನೇಪಾಳ ಆಟಗಾರರು ಬ್ಯಾಟಿಂಗ್‌ನಲ್ಲಿ ಪ್ರತಿ ಫೋರ್‌ಗೆ 25,000 ರೂಪಾಯಿ ನೀಡುವುದಾಗಿ ARNA ಬಿಯರ್ ಕಂಪನಿ ಘೋಷಿಸಿದೆ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಆಡುವ 11ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಆದರೆ, ತಂಡದ ಮ್ಯಾನೇಜ್‌ಮೆಂಟ್ ವೇಗಿ ಪ್ರಸಿದ್ಧ್ ಕೃಷ್ಣ ಅವರ ಫಿಟ್‌ನೆಸ್ ಅನ್ನು ಪರೀಕ್ಷಿಸಲು ಎದುರು ನೋಡಬಹುದು.
ಪ್ರಸಿದ್ಧ್ ಕೃಷ್ಣ ಅವರು ಜಸ್ಪ್ರೀತ್ ಬುಮ್ರಾ ಜೊತೆಗೆ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದರು.
ಮತ್ತೊಂದೆಡೆ, ನೇಪಾಳ ತಂಡದಲ್ಲಿ ಭೀಮ್ ಶಾರ್ಕಿ ಅವರು ಮೀಸಲು ಬ್ಯಾಟರ್ ಆಗಿ ತಂಡದ ಭಾಗವಾಗಿದ್ದಾರೆ. ಆದರೆ ಮುಲ್ತಾನ್‌ನಲ್ಲಿ ನಡೆದ 2023ರ ಏಷ್ಯಾ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 238 ರನ್‌ಗಳಿಂದ ಸೋತ ಅದೇ 11ರ ಬಳಗವನ್ನು ನೇಪಾಳ ಕಣಕ್ಕಿಳಿಸಬಹುದು.
ಭಾರತ ಮತ್ತು ನೇಪಾಳ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ/ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಸೋಂಪಾಲ್ ಕಾಮಿ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಕುಶಾಲ್ ಮಲ್ಲಾ, ಕರಣ್ ಕೆಸಿ, ಸಂದೀಪ್ ಲುಮಿಶ್ಚಾನೆ, ಲಲಿತ್ ರಾಜಬನ್ಶಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications