ಕೊನೆಯ ಬಾರಿ ಭಾರತ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಭರ್ತಿ 10 ವರ್ಷ: ರೋಚಕ ಕಾದಾಟದ ಕ್ಷಣಗಳ ಹೈಲೈಟ್ಸ್
ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇಂದಿಗೆ(ಜೂನ್ 23) ಭರ್ತಿ 10 ವರ್ಷಗಳು ಪೂರ್ಣವಾಗಿದೆ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿದ್ದ ಈ ಚಾಂಪಿಯನ್ಸ್ ಟ್ರೋಪಿಯಲ್ಲಿ ಫೈನಲ್‌ಗೆ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ಪ್ರವೇಶಿಸಿತ್ತು. ಮಳೆಯಿಂದ ಅಡ್ಡಿಯುಂಟಾಗಿದ್ದ ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿತ್ತು. ಧೋನಿ ನಾಯಕತ್ವದಈ ಸಾಧನೆ ಮಾಡಿದ ಬಳಿಕ ಒಂದು ದಶಕ ಕಳೆದರೂ ಮತ್ತೊಂದು ಟ್ರೋಫಿ ಗೆಲ್ಲಲು ಭಾರತ ತಂಡಕ್ಕೆ ಸಾಧ್ಯವಾಗಿಲ್ಲ ಅನ್ನೋದು ವಿಪರ್ಯಾಸ.
ಇನ್ನು ಅಂದು ನಡೆದ ಈ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದ ಕಾರಣ 50 ಓವರ್‌ಗಳ ಪಂದ್ಯ 20 ಓವರ್‌ಗಳ ಪಂದ್ಯವಾಗಿ ಬದಲಾಗಿತ್ತು. ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು 129 ರನ್ ಮಾತ್ರ. ಒಂದು ಹಂತದಲ್ಲಿ ಟೀಮ್ ಇಂಡಿಯಾ 13 ಓವರ್‌ಗಳ ಅಂತ್ಯದ ಸಂದರ್ಭದಲ್ಲಿ 5 ವಿಕೆಟ್ ಕಳೆದುಕೊಂಡು 66 ರನ್‌ಗಳನ್ನು ಮಾತ್ರವೇ ಗಳಿಸಿತ್ತು.

ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊಹ್ಲಿ- ಜಡೇಜಾ ಜೊತೆಯಾಟದ ಬಲ
ಆದರೆ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ 47 ರನ್‌ಗಳ ಜೊತೆಯಾಟ ತಂಡಕ್ಕೆ ಬಲ ನೀಡಿದ್ದು 129 ರನ್‌ಗಳ ವರೆಗೆ ವಿಸ್ತರಿಸಲು ಕಾರಣವಾಯಿತು. ವಿರಾಟ್ ಕೊಹ್ಲಿ 34 ಎಸೆತಗಳನ್ನು ಎದುರಿಸಿ 43 ರನ್ ಬಾರಿಸುವ ಮೂಲಕ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದರು. ಇನ್ನು ಮತ್ತೊಂದೆಡೆ ಜಡೇಜಾ 25 ಎಸೆತಗಳಲ್ಲಿ 33 ರನ್ ಬಾರಿಸಿ ಅಜೇಯವಾಗುಳಿದರು. ಶಿಖರ್ ಧವನ್ ಅವರ ಬ್ಯಾಟ್‌ನಿಂದಲೂ 31 ರನ್‌ಗಳ ಕೊಡುಗೆ ಬಂದಿತ್ತು.
ಭಾರತದಿಂದ ಪಂದ್ಯ ಕಸಿಯುವ ಭೀತಿ ಮೂಡಿಸಿದ ಮಾರ್ಗನ್- ಬೊಪಾರ ಜೋಡಿ
ಇನ್ನು ಭಾರತ ತಂಡ ನೀಡಿದ್ದ ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೂಡ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತ್ತು. 8.4 ಓವರ್‌ಗಳ ಮುಕ್ತಾಯದ ಸಂದರ್ಭದಲ್ಲಿ 46 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಇಂಗ್ಲೆಂಡ್. ಆದರೆ ಇಯಾನ್ ಮಾರ್ಗನ್ ಹಾಗೂ ರವಿ ಬೋಪಾರ ಐದನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನು ಕಸಿಯುವ ಭೀತಿ ಮೂಡಿಸಿದರು. ಈ ಹಂತದಲ್ಲಿ ಪಂದ್ಯ ಸ್ಪಷ್ಟವಾಗಿ ಇಂಗ್ಲೆಂಡ್ ಹಿಡಿತದಲ್ಲಿತ್ತು.
ತಿರುವು ನೀಡಿದ ಇಶಾಂತ್ ಎಸೆದ ಆ ಓವರ್
ಇನ್ನು ಈ ಪಂದ್ಯಕ್ಕೆ ತಿರುವು ನೀಡಿದ್ದು ಇಶಾಂತ್ ಶರ್ಮಾ ಎಸೆದ 18ನೇ ಓವರ್. ಈ ಓವರ್‌ನಲ್ಲಿ ಇಶಾಂತ್ ಶರ್ಮಾ ಸೆಟ್ ಆಗಿದ್ದ ಇಬ್ಬರು ಬ್ಯಾಟರ್‌ಗಳಾದ ಇಯಾನ್ ಮಾರ್ಗನ್ ಹಾಗೂ ರವಿ ಬೋಪಾರ ಇಬ್ಬರನ್ನು ಕೂಡ ಔಟ್ ಮಾಡಿ ಫೆವಿಲಿಯನ್‌ಗೆ ಅಟ್ಟಿದರು. ಇದರ ಬೆನ್ನಿಗೆ ಜಡೇಜಾ ಕೂಡ ಜೋಸ್ ಬಟ್ಲರ್ ಅವರನ್ನು ಗೋಲ್ಡನ್ ಡಕ್‌ಗೆ ಬಲಿ ಪಡೆಯುವ ಮೂಲಕ ಆತಿಥೇಯರಿಗೆ ಮತ್ತೊಂದು ಆಘಾತ ನೀಡಿದರು.
ಐತಿಹಾಸಿಕ ದಾಖಲೆ ಬರೆದ ಧೋನಿ
ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ 15 ರನ್‌ಗಳ ಅಗತ್ಯವಿದ್ದಾಗ ಆರ್ ಅಶ್ವಿನ್ ಬೌಲಿಂಗ್ ದಾಳಿಗಿಳಿದರು. ಈ ಒತ್ತಡದ ಸಂದರ್ಭದಲ್ಲಿ 9 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟ ಆರ್ ಅಶ್ವಿನ್ ಭಾರತ ತಂಡದ ಗೆಲುವು ಖಚಿತಪಡಿಸಿದರು. 5 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಟೀಮ್ ಇಂಡಿಯಾ 2011ರ ವಿಶ್ವಕಪ್ ಗೆದ್ದ ಎರಡು ವರ್ಷಗಳ ಅಂತರದಲ್ಲಿ ಮತ್ತೊಂದು ಐಸಿಸಿ ಟ್ರೋಪಿ ಗೆದ್ದ ಸಾಧನೆ ಮಾಡಿತು. ಈ ಮೂಲಕ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಎಲ್ಲಾ ಐಸಿಸಿ ಟ್ರೋಫಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ದಾಖಲೆ ಬರೆದರು.
ಮರೀಚಿಕೆಯಾದ ಐಸಿಸಿ ಟ್ರೋಫಿ
2013ರ ಬಳಿಕ ನಡೆದ ಐಸಿಸಿ ಟೂರ್ನಿಗಳಲ್ಲಿಯೂ ಭಾರತ ಅದ್ಭುತ ಪ್ರದರ್ಶನಗಳನ್ನು ನೀಡುತ್ತಾ ಭಾರತವು ಹಲವಾರು ಟೂರ್ನಿಗಳಲ್ಲಿ ಸೆಮಿ-ಫೈನಲ್ ಮತ್ತು ಫೈನಲ್‌ಗೆ ಪ್ರವೇಶ ಪಡೆದಿದೆ. ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಲಂಡನ್‌ನ ಕೆನ್ನಿಂಗ್‌ಟನ್ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿಯೂ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಮತ್ತೊಂದು ಆಘಾತ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications