ದೇಶದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಗಳಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಒಂದು. ಹಲವು ಕಾರಣಗಳಿಗೆ ಈ ಅಂಗಳ ಸ್ಮರಣೀಯ. ಇದೇ ಅಂಗಳದಲ್ಲಿ ಹಲವು ಖ್ಯಾತ ನಾಮ ಆಟಗಾರರು ಆಡಿ ಇದರ ಘನತೆ ಹೆಚ್ಚಿಸಿದ್ದಾರೆ. ಈ ಮೈದಾನವನ್ನು ಮೊದಲು ಬ್ಯಾಟಿಂಗ್ ಸ್ವರ್ಗ ಎಂದೇ ಕರೆಯುತ್ತಿದ್ದರು. ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಇದೇ ತವರು. ಹೀಗಾಗಿ ಅಭಿಮಾನಿಗಳಿಗೆ ಈ ಮೈದಾನ ಎಂದ್ರೆ ವಿಶೇಷ ಅಭಿಮಾನ.
ಆದರೆ ಈ ಅಭಿಮಾನ ದಿನ ಕಳೆದಂತೆ ಕಡಿಮೆ ಆಗುತ್ತದೆ. ಅದಕ್ಕೆ ಹಲವು ಕಾರಣಗಳು ಇವೆ. ಆದರೆ ಮೊನ್ನೆ (ಬುಧವಾರ) ನಡೆದ ಕಾಲ್ತುಳಿತ ಚಿನ್ನಸ್ವಾಮಿಯ ಚಿನ್ನದ ಇತಿಹಾಸಕ್ಕೆ ಕಪ್ಪು ಚುಕ್ಕಿಯನ್ನು ಇಟ್ಟಿದೆ. ಹಲವು ಆಟಗಾರರ ಸಂತಸದ ಕ್ಷಣಗಳಿಗೆ ಕಾರಣವಾಗಿದ್ದ ಮೈದಾನ ಈಗ, ಸಾವಿನ ಕಾರಣಕ್ಕೂ ನೆನಪಿಸಿಕೊಳ್ಳುವಂತೆ ಆಗಿದೆ. ನಗರದ ಹೃದಯದ ಭಾಗದಲ್ಲಿರುವ ಚಿನ್ನಸ್ವಾಮಿ ಅಂಗಳ ಎಂದು ಮಾಸದ ಘಟನೆಗೆ ಸಾಕ್ಷಿಯಾಗಿದೆ. ಕರ್ನಾಟಕ ಹಾಗೂ ಆರ್‌ಸಿಬಿ ಅಭಿಮಾನಿಗಳು ಎಂದಿಗೂ ಮರೆಯದಂತಹ ಕಹಿ ಘಟನೆ.

ಮಂಗಳವಾರ ಅಹದಮಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅದೇ ರಾತ್ರಿ ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಲಾಯಿತು. ಆಟಗಾರರು ಸಹ ಅಹಮದಾಬಾದ್‌ನಲ್ಲಿ ಫುಲ್ ಪಾರ್ಟಿ ಮಾಡಿದ್ರು. ಬುಧವಾರ ಆಟಗಾರರು ಬೆಂಗಳೂರಿಗೆ ಇಳಿಯುತ್ತಿದ್ದಂತೆ ಸಂಭ್ರಮ ಇಮ್ಮಡಿ ಆಯಿತು. ಅಭಿಮಾನಿಗಳು ಜನಸಾಗರದಲ್ಲಿ ಬಂದರು. ವಿಧಾನಸೌಧ ಹಾಗೂ ಚಿನ್ನಸ್ವಾಮಿ ಮೈದಾನದಲ್ಲಿ ಜನ ಸಾಗರ ಎಲ್ಲರನ್ನು ದಿಗ್ಭ್ರಮೆ ಗೊಳಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳು ಪ್ರವೇಶಿಸುವಾಗ ನುಕ್ಕುನುಗ್ಗಲು ಆಗಿ ಕಾಲ್ತುಳಿತ ಸಂಭವಿಸಿತು. ಈ ಘಟನೆಯಲ್ಲಿ ಸುಮಾರು 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಈ ಘಟನೆ ಕಳೆದು ಈಗ 50 ಗಂಟೆಗಳೇ ಕಳೆದಿವೆ. ಆದರೆ ಈ ಘಟನೆಗೆ ಬಗ್ಗೆ ಇನ್ನು ಕೆಎಸ್‌ಸಿಎ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದ ಹೊರಗಡೆ ಹೃದಯ ವಿದ್ರಾವಕ ಘಟನೆ ನಡೆದಿದೆ. ಆದೆರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಮಾತ್ರ ಈ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದ್ರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ಕೂ ಸಹ ಅಧಿಕಾರಿಗಳು ಮಾಡದೇ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕೆಎಸ್‌ಸಿಎ ಅಧಿಕಾರಿಗಳೇ ಇನ್ನಾದ್ರೂ ಎಸಿ ರೂಮ್‌ನಿಂದ ಹೊರ ಬಂದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಅಭಿಮಾನಿಗಳ ಆಕ್ರೋಶದ ಕೆಂಗಣ್ಣಿನಲ್ಲಿ ಕೆಎಸ್‌ಸಿಎ ನಾಶ ಆಗುವ ಮುನ್ನವೇ ಎಚ್ಚೆತ್ತುಕೊಂಡು ತನ್ನ ಕಾರ್ಯವನ್ನು ಮಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಅಭಿಮಾನಿಗಳ ಅಭಿಮಾನ ಕೊಂಚ ಆದ್ರು ಉಳಿಯುತ್ತದೆ. ಇಲ್ಲದೇ ಇದ್ದಲ್ಲಿ 11 ಜನರ ಶವದ ನಡುವೆ ಅಭಿಮಾನ ಮಣ್ಣು ಪಾಲಾಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.