ಭರವಸೆಯ ಯುವ ಆಟಗಾರ ವೈಭವ್ ಸೂರ್ಯವಂಶಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ 14ನೇ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ್ದ ಪ್ಲೇಯರ್, ಆಸೀಸ್ ಪ್ರವಾಸದಲ್ಲೂ ಎಲ್ಲರೂ ಹುಬ್ಬೇರುವಂತೆ ಬ್ಯಾಟ್ ಮಾಡಿದ್ದಾರೆ. ಈಗ ಇವರ ಆಟಕ್ಕೆ ಮನ್ನಣೆ ನೀಡಲಾಗಿದ್ದು, ತಂಡದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಹಾಗಿದ್ದರೆ ವೈಭವ್ ಸೂರ್ಯವಂಶಿಗೆ ನೀಡಿದ ಆ ಜವಾಬ್ದಾರಿ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
18ನೇ ಆವೃತ್ತಿಯ ಐಪಿಎಲ್‌ನ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಭಾರೀ ಮೊತ್ತ ನೀಡಿ ಖರೀದಿಸಿದಾಗಲೇ, ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದವು. ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ ವೈಭವ್, ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಈ ಪಂದ್ಯದಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಈ ಪಂದ್ಯದಿಂದ ಎಲ್ಲರ ಚಿತ್ತ ಇವರ ಮೇಲೆ ನೆಟ್ಟಿತು.

ಇಲ್ಲಿಂದ ವೈಭವ್ ಸೂರ್ಯವಂಶಿ ಹಿಂತಿರುಗಿ ನೋಡಲೇ ಇಲ್ಲ ಸಿಕ್ಕ ಅವಕಾವನ್ನು ಬಳಸಿಕೊಂಡು, ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಲು ಆರಂಭಿಸಿದರು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಯೂತ್ ತಂಡ ಪ್ರಕಟಿಸಿದಾಗ, ಆ ತಂಡದಲ್ಲಿ ವೈಭವ್ ಸಹ ಸ್ಥಾನ ಪಡೆದರು. ಈ ಪ್ರವಾಸದಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಎದುರಾಳಿಗಳನ್ನು ಕಾಡಿದ್ದ ವೈಭವ್, ಈಗ ರಣಜಿ ಟ್ರೋಫಿಯಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಪ್ರಸಕ್ತ ಸಾಲಿನ ರಣಜಿ ಟ್ರೋಫೀಗೆ ಬಿಹಾರ ತಂಡವನ್ನು ಆಯ್ಕೆ ಮಾಡಲಾಗಿದೆ. ಮೊದಲೆರೆಡು ಪಂದ್ಯಕ್ಕಾಗಿ ನಡೆದ ಆಯ್ಕೆಯಲ್ಲಿ ವೈಭವ್ ಅವರಿಗೆ ಉಪನಾಯಕನ ಪಟ್ಟವನ್ನು ನೀಡಲಾಗಿದೆ.
ವೈಭವ್ ಇಂಗ್ಲೆಂಡ್ ವಿರುದ್ಧ ನಡೆದಿದ್ದ 5 ಏಕದಿನ ಪಂದ್ಯಗಳಲ್ಲಿ ಇವರು ಒಂದು ಶತಕ ಸೇರಿದಂತೆ 355 ರನ್ ಕಲೆ ಹಾಕಿದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಇವರು 133 ರನ್ ಬಾರಿಸಿ ತಮ್ಮ ಕ್ಷಮತೆ ಪ್ರದರ್ಶಿಸಿದ್ದರು. ಇದರ ಪರಿಣಾಮ ಇವರಿಗೆ ಈಗ ಭರ್ಜರಿ ಗಿಫ್ಟ್ ನೀಡಲಾಗಿದೆ. ಬಿಹಾರ ರಾಜ್ಯ ಕ್ರಿಕೆಟ್ ಸಂಸ್ಥೆ ಭಾನುವಾರ ಮೊದಲೆರಡು ರಣಜಿ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಪ್ರಕಟಿತ 15 ಆಟಗಾರರ ಪಟ್ಟಿಯಲ್ಲಿ ವೈಭವ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಶಕಿಬುಲ್ ಗಣಿ ಅವರನ್ನು ಬಿಹಾರ ಕ್ರಿಕೆಟ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಈ ತಂಡವು ಅಕ್ಟೋಬರ್ 15 ರ ಬುಧವಾರದಂದು ರಣಜಿ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ರಣಜಿ ಟ್ರೋಫಿಗಾಗಿ ಬಿಹಾರ ತಂಡ: ಪಿಯೂಷ್ ಕುಮಾರ್ ಸಿಂಗ್, ಭಾಸ್ಕರ್ ದುಬೆ, ಶಕಿಬುಲ್ ಗನಿ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅರ್ನವ್ ಕಿಶೋರ್, ಆಯುಷ್ ಆನಂದ್ ಲೋಹ್ರುಕಾ (ವಿಕೆಟ್ ಕೀಪರ್), ಬಿಪಿನ್ ಸೌರಭ್ (ವಿಕೆಟ್ ಕೀಪರ್), ಅಮೋದ್ ಯಾದವ್, ನವಾಜ್ ಖಾನ್, ಸಾಕಿಬ್ ಹುಸೇನ್, ರಾಘವೇಂದ್ರ ಪ್ರತಾಪ್ ಸಿಂಗ್, ಸಚಿನ್ ಕುಮಾರ್ ಸಿಂಗ್, ಹಿಮಾಂಶು ಸಿಂಗ್, ಖಾಲಿದ್ ಆಲಂ, ಸಚಿನ್ ಕುಮಾರ್.