ಮೊಹಾಲಿ, ನ.05: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾದ ಆಡುವ XI ನಲ್ಲಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಗೆ ಸ್ಥಾನ ಸಿಕ್ಕಿಲ್ಲ. ಮೊದಲ ದಿನದಾಟದ ಅಂತ್ಯ: ಭಾರತ 201 ಆಲೌಟ್ , ದಕ್ಷಿಣ ಆಫ್ರಿಕಾ 28/2, ಎಲ್ಗಾರ್ 13, ಆಮ್ಲಾ 9 ಗಳಿಸಿ ಔಟಾಗದೆ ಉಳಿದಿದ್ದಾರೆ.
ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಶಿಖರ್ ಧವನ್, ಪೂಜಾರಾ, ಕೊಹ್ಲಿ ವಿಕೆಟ್ ಆರಂಭದಲ್ಲೇ ಕಳೆದುಕೊಂಡ ಮೇಲೆ ಚೇತರಿಕೆ ಕಾಣಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 201 ಸ್ಕೋರಿಗೆ ಆಲೌಟ್ ಆಗಿದೆ. ಎಲ್ಗಾರ್ 4 ವಿಕೆಟ್ ಪಡೆದುಕೊಂದರೆ, ಫಿಲಾಂಡರ್, ತಾಹೀರ್ ತಲಾ 2 ವಿಕೆಟ್ ಪಡೆದರು. ಭಾರತದ ಪರ ಮುರಳಿ ವಿಜಯ್ 75ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದರು. ಆರ್ ಅಶ್ವಿನ್ 20 ರನ್ ಗಳಿಸಿ ಔಟಾಗದೆ ಉಳಿದರು.
| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ
ಟಿ20 ಹಾಗೂ ಏಕದಿನ ಕ್ರಿಕೆಟ್ ಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಕ್ಕೆ ಈಗ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಟೆಸ್ಟ್ ತಂಡ ನಾಲ್ಕು ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಗುರುವಾರದಿಂದ ಆಡುತ್ತಿದೆ. [ಮುನ್ನೋಟ: ಟೀಂ ಇಂಡಿಯಾಕ್ಕಿದೆ ಸ್ಪಿನ್ ಬಲ]

ಇಶಾಂತ್ ಶರ್ಮ ಇಲ್ಲದೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಭುವನೇಶ್ವರ್ ಕುಮಾರ್ ಹಾಗೂ ಸ್ಟುವರ್ಟ್ ಬಿನ್ನಿ ಕೂಡಾ ಸ್ಥಾನ ಪಡೆದಿಲ್ಲ. ಶ್ರೀಲಂಕಾ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ ನಂ.1 ತಂಡವನ್ನು ಹೇಗೆ ಕಟ್ಟಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ವಿರಾಟ್ ಕೊಹ್ಲಿ ಅವರು ತಮ್ಮ 27ನೇ ಹುಟ್ಟುಹಬ್ಬದ ದಿನದಂದು ನಿರೀಕ್ಷೆಯಂತೆ ತಂಡಕ್ಕೆ 3 ಸ್ಪಿನ್ನರ್ ಆಯ್ಕೆ ಮಾಡಿಕೊಂಡಿದ್ದಾರೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೆಜ, ಆರ್ ಅಶ್ವಿನ್, ಅಮಿತ್ ಮಿಶ್ರಾ, ವರುಣ್ ಅರೋನ್, ಉಮೇಶ್ ಯಾದವ್.
ದಕ್ಷಿಣ ಆಫ್ರಿಕಾ : ಹಶೀಂ ಆಮ್ಲಾ (ನಾಯಕ), ಎಬಿ ಡಿ ವಿಲಿಯರ್ಸ್ (ಉಪ ನಾಯಕ), ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗಾರ್, ಸಿಮೋನ್ ಹಾರ್ಮರ್, ಇಮ್ರಾನ್ ತಾಹೀರ್, ವೆರ್ನೊನ್ ಫಿಲ್ಯಾಂಡರ್,ಕಾಗಿಸೋ ರಬಡಾ, ಡೇಲ್ ಸ್ಟೈನ್, ಡೇನ್ ವಿಲಾಸ್ (ವಿಕೆಟ್ ಕೀಪರ್). (ಒನ್ ಇಂಡಿಯಾ ಸುದ್ದಿ)