2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮಾಡಿದ್ದ ಈ 3 ತಪ್ಪನ್ನು ಈ ಬಾರಿಯೂ ಮಾಡಿದರೆ ಮತ್ತೆ ಮುಖಭಂಗ ಖಚಿತ!

ಯುಎಇಯಲ್ಲಿ ಆಯೋಜನೆಗೊಂಡಿದ್ದ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡು ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಸೋಲುವುದರ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ಭಾರೀ ನಿರಾಸೆಯನ್ನುಂಟುಮಾಡಿತ್ತು.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಸೋತದ್ದು ತಂಡದ ವಿಶ್ವಕಪ್ ಪಯಣಕ್ಕೆ ಭಾರಿ ಪೆಟ್ಟನ್ನು ಕೊಟ್ಟಿತ್ತು. ಹಾಗೂ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋತ ಪರಿಣಾಮ ಟೂರ್ನಿ ಮುಕ್ತಾಯವಾದ ನಂತರ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಇನ್ನು ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಕಳೆದ ಬಾರಿ ಹೀನಾಯವಾಗಿ ಸೋತು ಟೂರ್ನಿಯಿಂದ ಹಿಂತಿರುಗಿದ್ದ ಟೀಮ್ ಇಂಡಿಯಾ ಈ ಬಾರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ. ಆದರೆ ಟೀಮ್ ಇಂಡಿಯಾ ತನ್ನ ಈ ಗುರಿಯನ್ನು ಯಶಸ್ವಿಯಾಗಿ ತಲುಪಬೇಕೆಂದರೆ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮಾಡಿದ್ದ ಈ ಕೆಳಕಂಡ 3 ತಪ್ಪುಗಳನ್ನು ಈ ಬಾರಿ ಮಾಡದೆಯೇ ಉತ್ತಮ ಪ್ರದರ್ಶನ ನೀಡಬೇಕಿದೆ.

ಪವರ್ ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೇ ಉತ್ತಮ ರನ್ ಕಲೆ ಹಾಕಬೇಕು
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಾಣಲು ಪವರ್ ಪ್ಲೇ ಓವರ್‌ಗಳಲ್ಲಿ ತಂಡ ತನ್ನ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೂ ಸಹ ಕಾರಣ ಎನ್ನಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪವರ್ ಪ್ಲೇ ಮುಕ್ತಾಯವಾಗುವ ಮುನ್ನವೇ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಔಟ್ ಆಗಿದ್ದರು ಹಾಗೂ ತಂಡ ಪವರ್ ಪ್ಲೇನಲ್ಲಿ ಕೇವಲ 30+ ರನ್‌ಗಳನ್ನು ಕಲೆ ಹಾಕಿತ್ತು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೂಡಾ ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ 40 ರನ್‌ಗಳ ಗಡಿ ಮುಟ್ಟಲಾಗದೇ ಹಿನ್ನಡೆ ಅನುಭವಿಸಿತ್ತು. ಹೀಗೆ ಕಳೆದ ಆವೃತ್ತಿಯಲ್ಲಿ ಪವರ್ ಪ್ಲೇನಲ್ಲಿ ಮಾಡಿದ್ದ ಈ ತಪ್ಪನ್ನು ಟೀಮ್ ಇಂಡಿಯಾ ಈ ಬಾರಿ ಸರಿಪಡಿಸಿಕೊಳ್ಳಬೇಕಿದೆ.

ಸೋಲಿನ ಬಳಿಕ ಆಟಗಾರರ ಕ್ರಮಾಂಕ ಬದಲಾವಣೆ
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್‍ಗಳ ಸೋಲನ್ನು ಅನುಭವಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಲಾಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಆಡಲು ಅವಕಾಶ ನೀಡಲಾಗಿತ್ತು, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು, ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು ಹಾಗೂ ಪಾಕ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಳ್ಳೆ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಹೀಗೆ ಒಂದು ಸೋಲಿನ ಬಳಿಕ ಟೀಮ್ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದರೂ ಸಹ ಪಾಕ್ ವಿರುದ್ಧ ನೀಡಿದ್ದ ಪ್ರದರ್ಶನಕ್ಕಿಂತ ಕೆಟ್ಟ ಪ್ರದರ್ಶನವನ್ನು ತಂಡ ನ್ಯೂಜಿಲೆಂಡ್ ವಿರುದ್ಧ ನೀಡಿತ್ತು. ಹೀಗಾಗಿ ಸೋಲಿನ ಬಳಿಕ ಆಟಗಾರರ ಕ್ರಮಾಂಕದ ಬದಲಾವಣೆಗೆ ಕೈ ಹಾಕುವುದನ್ನು ಈ ಬಾರಿ ಟೀಮ್ ಇಂಡಿಯಾ ತಪ್ಪಿಸಬೇಕಿದೆ.

ಅನುಭವಿಗಳನ್ನು ಬಿಟ್ಟು ಐಪಿಎಲ್ ಸ್ಟಾರ್ ಆಟಗಾರರಿಗೆ ಮಣೆ ಹಾಕಬಾರದು
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅನುಭವಿ ಸ್ಪಿನ್ ಬೌಲರ್‌ಗಳಾದ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ಕಡೆಗಣಿಸಿ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಅವಕಾಶ ಪಡೆದ ಈ ಇಬ್ಬರು ಯುವ ಆಟಗಾರರೂ ಸಹ ಕಳೆದ ಬಾರಿಯ ಟೂರ್ನಿಯಲ್ಲಿ ಯಾವುದೇ ವಿಕೆಟ್ ಪಡೆಯದೇ ಮಂಕಾದರು. ಹೀಗಾಗಿ ಅನುಭವಿ ಆಟಗಾರರನ್ನು ಕಡೆಗಣಿಸಿ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ಆಟಗಾರರಿಗೆ ಈ ಬಾರಿ ಅವಕಾಶ ಕೊಡುವುದನ್ನು ಆದಷ್ಟು ಟೀಮ್ ಇಂಡಿಯಾ ತಡೆಗಟ್ಟಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications