
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ಬಳಿಕ ಎರಡನೇ ಪಂದ್ಯದಲ್ಲಿ ವಿರಾಟ್ ಪಡೆ ಬೃಹತ್ ಮೊತ್ತವನ್ನು ಪೇರಿಸಿದ ಬಳಿಕವೂ ಇಂಗ್ಲೆಂಡ್ ಬ್ಯಾಟಿಂಗ್ ಅಬ್ಬರದ ಮುಂದೆ ಸೋಲು ಕಾಣಬೇಕಾಯಿತು. ಹೀಗಾಗಿ ಭಾನುವಾರ ನಡೆಯುವ ಸರಣಿಯ ಅಂತಿಮ ಪಂದ್ಯ ನಿರ್ಣಾಯಕವೆನಿಸಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಸದ್ಯ 1-1 ಅಂತರದಿಂದ ಸಮಬಲದಲ್ಲಿದೆ. ಎರಡನೇ ಪಂದ್ಯದಲ್ಲಿ ಭಾರತ ನೀಡಿದ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಹುಮ್ಮಸ್ಸಿನಲ್ಲಿರುವ ಇಂಗ್ಲೆಂಡ್ ತಂಡ ಆ ಗೆಲುವಿನ ಕ್ಷಣಗಳನ್ನು ಮುಂದುವರಿಸುವ ಹಂಬಲದಲ್ಲಿದೆ ಈ ಮಧ್ಯೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆಯಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಗೆದ್ದ ಬಳಿಕ ಭಾರತ ಟಿ20 ಸರಣಿಯನ್ನು 3-2 ಅಂತರದಿಂದ ವಶಕ್ಕೆ ಪಡೆದಿತ್ತು. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಸಕಾರಾತ್ಮಕವಾಗಿಯೇ ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಬೌಲಿಂಗ್ ವಿಫಲವಾದರೂ ಬ್ಯಾಟಿಂಗ್‌ನಲ್ಲಿ ಮಿಂಚಿ ತಂಡ ಗೆಲುವು ಸಾಧಿಸಿ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಎರಡನೇ ಪಂದ್ಯದಲ್ಲಿ ಭಾರತ ನೀಡಿದ 317 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಜಾನಿ ಬೈರ್‌ಸ್ಟೋವ್ ಹಾಗೂ ಬೆನ್‌ಸ್ಟೋಕ್ಸ್ ಸ್ಪೋಟಕ ಆಟವನ್ನು ನೀಡಿದರು. ಭಾರತೀಯ ಬೌಲರ್‌ಗಳನ್ನು ಈ ಜೋಡಿ ಎಂಎಸ್‌ಎ ಅಂಗಳದ ಎಲ್ಲಾ ಮೂಲೆಗೂ ಅಟ್ಟಿದರು. ಭಾರತದ ಎಡಗೈ ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಹಾಗೂ ಕುಲ್‌ದೀಪ್ ಯಾದವ್ ಅತ್ಯಂತ ದುಬಾರಿ ಎನಿಸಿದರು. ಈ ಇಬ್ಬರು 16 ಓವರ್‌ಗಳನ್ನು ಎಸೆದಿದ್ದು ಭರ್ಜರಿ 156 ರನ್ ಬಿಟ್ಟುಕೊಟ್ಟಿದ್ದರು.
ಇನ್ನು ಶುಕ್ರವಾರದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದು ರನ್‌ನಿಂದ ಶತಕವಂಚಿತರಾದ ಬೆನ್ ಸ್ಟೋಕ್ಸ್ ಫಾರ್ಮ್‌ಗೆ ಮರಳಿರುವುದು ಇಂಗ್ಲೆಂಡ್ ಪಡೆಗೆ ದೊಡ್ಡ ಶಕ್ತಿಯನ್ನು ನೀಡಿದೆ. ಭಾರತದ ವಿರುದ್ಧದ ಇಡೀ ಸರಣಿಯಲ್ಲಿ ಸ್ಟೋಕ್ಸ್ ಬ್ಯಾಟ್‌ನಿಂದ ಅತ್ಯುತ್ತಮ ಪ್ರದರ್ಶನ ಬಂದಿರಲಿಲ್ಲ. ಅಂತಿಮ ಪಂದ್ಯ ಈಗ ಕುತೂಹಲ ಮೂಡಿಸಿದೆ.