Ind vs Aus: ಗೆಲ್ಲುವ ಅವಕಾಶ ಕಳೆದುಕೊಂಡೆವು: 3ನೇ ಟೆಸ್ಟ್ ಸ್ಥಳಾಂತರಿಸಿದ್ದಕ್ಕೆ ಆಸ್ಟ್ರೇಲಿಯಾ ಮಾಧ್ಯಮಗಳ ರೋಧನೆ

ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಮಾಡಿದರೆ ಆಸ್ಟ್ರೇಲಿಯಾದ ಮಾಧ್ಯಮಗಳು ಏನಾದರೊಂದು ಖ್ಯಾತೆ ತೆಗೆಯಲು ಯತ್ನಿಸುತ್ತಲೇ ಇರುತ್ತವೆ. ಭಾರತ ತಂಡದ ಆಟಗಾರರು ಕುಂತರೂ, ನಿಂತರೂ ತಪ್ಪು ಹುಡುಕುವ ಕೆಲಸ ಮಾಡುತ್ತವೆ.
ಈಗ ಆಸ್ಟ್ರೇಲಿಯಾ ತಂಡದ ಗೆಲುವಿನ ಅವಕಾಶವನ್ನು ಬಿಸಿಸಿಐ ಬೇಕಂತಲೇ ತಪ್ಪಿಸಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಹೊಸ ವಿವಾದ ಮಾಡಲು ಯತ್ನಿಸುತ್ತಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯವನ್ನು ಧರ್ಮಶಾಲಾದಿಂದ ಇಂದೋರ್ ಗೆ ಸ್ಥಳಾಂತರಿಸಿರುವುದಕ್ಕೆ ಬೊಬ್ಬೆ ಹೊಡೆಯಲು ಆರಂಭಿಸಿವೆ.
ಧರ್ಮಶಾಲಾದಲ್ಲಿ ಪಿಚ್ ವೇಗಿಗಳಿಗೆ ನೆರವಾಗುತ್ತಿತ್ತು ಅದೇ ಕಾರಣಕ್ಕೆ ಪಂದ್ಯವನ್ನು ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುವ ಇಂದೋರ್ ಗೆ ಸ್ಥಳಾಂತರಿಸಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಆರೋಪ ಮಾಡಿವೆ. ಧರ್ಮಶಾಲಾದಲ್ಲಿ ಆಡಿದ್ದರೆ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತಿತ್ತು ಎನ್ನುವುದು ಆಸ್ಟ್ರೇಲಿಯಾ ಮಾಧ್ಯಮಗಳ ವಾದವಾಗಿದೆ.
ನಾಗ್ಪುರದಲ್ಲಿ ಸ್ಪಿನ್‌ಗೆ ನೆರವಾಗುವ ಪಿಚ್‌ನಲ್ಲಿ ಹೀನಾಯವಾಗಿ ಸೋತ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳು ನೆಮ್ಮದಿ ಕಳೆದುಕೊಂಡಿವೆ. ಆಸ್ಟ್ರೇಲಿಯಾ 4-0 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಲಿದೆ ಎನ್ನುವ ಭಯ ಶುರುವಾದಂತಿದೆ. ಇದೇ ಕಾರಣಕ್ಕೆ ಸೋಲಿಗೆ ಕಾರಣ ಹುಡುಕುವ ಕೆಲಸದಲ್ಲಿ ನಿರತವಾಗಿವೆ.

ಮೊದಲನೇ ಪಂದ್ಯದ ವೇಳೆ ವಿವಾದ ಮಾಡಲು ಯತ್ನ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯದಲ್ಲಿ ಕೂಡ ವಿವಾದ ಮಾಡಲು ಯತ್ನಿಸಲಾಗಿತ್ತು. ಭಾರತ ತಂಡ ಪಿಚ್ ಅನ್ನು ಸ್ಪಿನ್‌ಗೆ ಅನುಕೂಲವಾಗುವಂತೆ ಸಿದ್ಧಪಡಿಸಿದೆ ಎಂದು ಹೇಳಿದ್ದವು.
ಪಂದ್ಯದ ಮೊದಲ ದಿನ ರವೀಂದ್ರ ಜಡೇಜಾ ಬೆರಳಿಗೆ ನೋವು ನಿವಾರಕ ಕ್ರೀಮ್ ಹಚ್ಚಿಕೊಂಡಿದ್ದನ್ನು, ಬಾಲ್ ವಿರೂಪಗೊಳಿಸಲು ಯತ್ನಿಸಿದ್ದಾರೆ ಎಂದು ಹೇಳುವ ಮೂಲಕ ಮತ್ತೊಂದು ಆರೋಪ ಮಾಡಿದ್ದವು. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರರೇ ವಿರೋಧ ವ್ಯಕ್ತಪಡಿಸಿ ಜಡೇಜಾ ಪರವಾಗಿ ಮಾತನಾಡಿದ್ದರು. ಪಿಚ್ ವಿಚಾರದಲ್ಲಿ ಕೂಡ ಭಾರತ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು.

ನವೀಕರಣ ಮುಗಿಯದ ಕಾರಣ ಪಂದ್ಯ ಸ್ಥಳಾಂತರ
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 3ನೇ ಟೆಸ್ಟ್ ಪಂದ್ಯ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬಾರಿ ಮಳೆ ಮತ್ತು ಹಿಮಪಾತವಾದ ಕಾರಣ ಕ್ರೀಡಾಂಗಣಕ್ಕೆ ಹಾನಿಯಾಗಿತ್ತು. ಕ್ರೀಡಾಂಗಣವನ್ನು ನವೀಕರಣ ಮಾಡಲಾಗುತ್ತಿದ್ದು, ಪಿಚ್ ಮತ್ತು ಔಟ್‌ಫೀಲ್ಡ್ ಬದಲಾವಣೆ ಮಾಡಲಾಗಿದೆ.
ಆದರೆ ಅತಿಯಾದ ಚಳಿ ಇರುವ ಕಾರಣ ಔಟ್‌ಫೀಲ್ಡ್‌ನಲ್ಲಿ ಹುಲ್ಲಿನ ಸಾಂದ್ರತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ತಕ್ಕಂತೆ ಇಲ್ಲದ ಕಾರಣ ಅನಿವಾರ್ಯವಾಗಿ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.
ಇಂದೋರ್ ನಲ್ಲಿ ಭಾರತ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಎರಡು ಟೆಸ್ಟ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ 18 ವಿಕೆಟ್ ಪಡೆದಿರುವುದು ಆಸ್ಟ್ರೇಲಿಯಾ ಮಾಧ್ಯಮಗಳ ನಿದ್ದೆಕೆಡಿಸಿದೆ. ಇದೇ ಕಾರಣಕ್ಕೆ ವಿವಾದ ಮಾಡಲು ಯತ್ನಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications