ಸೋತ ಪಂದ್ಯದಲ್ಲೂ ದಾಖಲೆ ಬರೆದ ಕೊಹ್ಲಿ ಹಾಗೂ ತಂಡ
ಬೆಂಗಳೂರು, ಸೆ. 29: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದರೂ ಕೆಲ ದಾಖಲೆಗಳನ್ನು ಬರೆದಿದೆ.
ಟೀಂ ಇಂಡಿಯಾ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಮೇಶ್ ಯಾದವ್ ದಾಖಲೆಗಳನ್ನು ಸಾಧಿಸಿದ್ದಾರೆ. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 3-1 ರ ಮುನ್ನಡೆ ಕಾಯ್ದುಕೊಂಡಿದೆ. ಕೊನೆಯ ಏಕದಿನ ಪಂದ್ಯ ನಾಗ್ಪುರ್ ನಲ್ಲಿ ನಡೆಯಲಿದೆ.
ಸತತ 9 ಪಂದ್ಯಗಳನ್ನು ಗೆದ್ದಿದ್ದ ಕೊಹ್ಲಿ ನಾಯಕತ್ವದ ತಂಡಕ್ಕೆ ಸ್ಮಿತ್ ಪಡೆ ಸೋಲುಣಿಸಿದೆ. 13 ಪಂದ್ಯಗಳ ನಂತರ ಆಸ್ಟ್ರೇಲಿಯಾ ತಂಡವು ಗೆಲುವಿನ ಹಾದಿ ಹಿಡಿದಿದೆ.
ನಾಲ್ಕನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ರನ್ ಚೇಸ್ ಮಾಡಿದ ಟೀಂ ಇಂಡಿಯಾ 313/8 ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಎಬಿ ಡಿ ವಿಲಿಯರ್ಸ್ ದಾಖಲೆ ಮುರಿದ ಕೊಹ್ಲಿ
ಅತಿ ಕಡಿಮೆ ಪಂದ್ಯಗಳಲ್ಲಿ 2 ಸಾವಿರ ರನ್ ಗಳಿಕೆ ಮಾಡಿರುವ ಸಾಧನೆಯನ್ನ ವಿರಾಟ್ ಕೊಹ್ಲಿ ಮಾಡಿದರು. ದಕ್ಷಿಣ ಆಫ್ರಿಕಾದ ಕ್ಯಾಪ್ಟನ್ ಆಗಿದ್ದ ಎಬಿಡಿ 41 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಕೇವಲ 36 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರೈಕೆ ಮಾಡಿ ದಾಖಲೆ ಬರೆದಿದ್ದಾರೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 21ರನ್ ಗಳಿಸಿ ಔಟಾದರು.

ಉಮೇಶ್ ಯಾದವ್ ಸಾಧನೆ
ತಮ್ಮ 71 ನೇ ಪಂದ್ಯವನ್ನಾಡಿದ ಭಾರತದ ವೇಗಿ ಉಮೇಶ್ ಯಾದವ್ ಅವರು ಏಕದಿನ ಕ್ರಿಕೆಟ್ ನಲ್ಲಿ 100 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ 100 ನೇ ವಿಕೆಟ್ ಗಳಿಸಿದರು. ಚಿತ್ರದಲ್ಲಿ ಕೇದಾದ್ ಜಾಧವ್ ಅವರು ವಿಕೆಟ್ ಪಡೆದ ಸಂತಸದಲ್ಲಿದ್ದಾರೆ.

ವಾರ್ನರ್ -ಫಿಂಚ್ ದಾಖಲೆ
ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಅರೋನ್ ಫಿಂಚ್ ಅವರ ಸಂಪಾದಿಸಿದ ಜೊತೆಯಾಟ(231 ರನ್) ಎರಡನೇ ಅತಿದೊಡ್ಡ ಜೊತೆಯಾಟ ಎನಿಸಿಕೊಂಡಿದೆ. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಕಿರ್ಸ್ಟನ್ ಹಾಗೂ ಹರ್ಷಲ್ ಗಿಬ್ಸ್ 2000ರಲ್ಲಿ ಕೊಚ್ಚಿಯಲ್ಲಿ 235ರನ್ ಜೊತೆಯಾಟ ಸಾಧಿಸಿದ್ದರು.

ಹಾರ್ದಿಕ್ ಪಾಂಡ್ಯ ಸಿಕ್ಸರ್ ದಾಖಲೆ
ಭಾರತದ ಹಾರ್ದಿಕ್ ಪಾಂಡ್ಯ 2017ರಲ್ಲಿ ಸರಿ ಸುಮಾರು 26 ಸಿಕ್ಸರ್ ಬಾರಿಸಿದ್ದು, ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ್ದ ದಾಖಲೆ ಹೊಂದಿದ್ದ ಇಯಾನ್ ಮಾರ್ಗನ್ ರನ್ನು ಪಾಂಡ್ಯ ಹಿಂದಿಕ್ಕಿದ್ದಾರೆ.

ಸತತ ಸೋಲಿನ ಬಳಿಕ ಆಸೀಸ್ ಗೆ ಜಯ
ಸತತ 13 ಪಂದ್ಯಗಳಲ್ಲಿ ಸೋಲು ಕಂಡಿದ್ದ ಆಸ್ಟ್ರೇಲಿಯಾ ತಂಡವು ಕೊನೆಗೂ ಗೆಲುವಿನ ಹಾದಿಯನ್ನು ಕಂಡಿದೆ. ಇನ್ನೊಂದೆಡೆ, 9 ಗೆಲುವು ಸಾಧಿಸಿ ಮುನ್ನುಗ್ಗುತ್ತಿದ್ದ ಕೊಹ್ಲಿಪಡೆಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.

ಆಸೀಸ್ ವಿರುದ್ಧ ರೋಹಿತ್ ದಾಖಲೆ
ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಆಸ್ಟ್ರೇಲಿಯಾ ವಿರುದ್ದ 50ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ್ದು, ಬೇರೆ ಯಾವ ಆಟಗಾರ ಕೂಡಾ ಈ ಸಾಧನೆ ಮಾಡಿಲ್ಲ. ಅಫ್ರಿದಿ ಅವರು ಶ್ರೀಲಂಕಾ ವಿರುದ್ಧ 63 ಸಿಕ್ಸ್ ಗಳಿಸಿದ ಸಾಧನೆ ಮಾಡಿದ್ದಾರೆ.

ಪಾಂಡ್ಯ ಸಾಧನೆ
ಮೊದಲ 25 ಏಕದಿನ ಪಂದ್ಯಗಳಲ್ಲಿ 500ರನ್ ಹಾಗೂ 25 ವಿಕೆಟ್ ಗಳಿಸಿದ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ಒಟ್ಟಾರೆ, ಈ ಸಾಧನೆ ಮಾಡಿದ ವಿಶ್ವದ 11ನೇ ಆಟಗಾರರಾಗಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ರನೌಟ್
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ನಡುವಿನ ಗೊಂದಲ, ರೋಹಿತ್ ರನೌಟ್ ಆಗಿದ್ದು, ಪಂದ್ಯಕ್ಕೆ ತಿರುವು ನೀಡಿದ್ದು ಸುಳ್ಳಲ್ಲ. ಈ ರೀತಿ ಇಬ್ಬರ ನಡುವೆ 6 ಬಾರಿ ಗೊಂದಲದ ರನೌಟ್ ಉಂಟಾಗಿದೆ. ನಾಲ್ಕು ಬಾರಿ ಕೊಹ್ಲಿ ಔಟಾಗಿದ್ದರೆ, ರೋಹಿತ್ 2 ಬಾರಿ ಔಟಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications