
ಕೊಲಂಬೋ, ಆಗಸ್ಟ್ 9: ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯೀಸ್ ವಿಧಾನದಲ್ಲಿ ಆತಿಥೇಯ ಶ್ರೀಲಂಕಾ 3 ರನ್ ರೋಚಕ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾಕ್ಕೆ 21 ಓವರ್ ಗಳಲ್ಲಿ 191 ರನ್ ಗುರಿ ನೀಡಲಾಗಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಶ್ರೀಲಂಕಾ ದಾಸುನ್ ಶಾನಕ (65/34), ಕುಸಾಲ್ ಪೆರೆರ (51/32), ತಿಸರ ಪೆರೆರ (ಅಜೇಯ 51/45) ಅರ್ಧ ಶತಕ ನೆರವಿನೊಂದಿಗೆ 39 ಓವರ್ ಗಳಲ್ಲಿ 7 ವಿಕೆಟ್ ಕಳೆದು 306 ರನ್ ಪೇರಿಸಿತ್ತು. ಪಂದ್ಯದ ವೇಳೆ ಮಳೆ ಅಡ್ಡಿಯಾಗಿದ್ದರಿಂದ ಮೊದಲ ಇನ್ನಿಂಗ್ಸ್ 39 ಓವರ್ ಗೆ ನಿಲ್ಲಿಸಲಾಯ್ತು.
ಡಕ್ವರ್ಥ್ ಲೂಯೀಸ್ ವಿಧಾನದಲ್ಲಿ 21 ಓವರ್ ಗೆ 191 ರನ್ ಗುರಿ ನೀಡಲಾಗಿದ್ದರಿಂದ ಪಂದ್ಯದ ಗೆಲುವು ದಕ್ಷಿಣ ಆಫ್ರಿಕಾನ್ನರ ಪರವಾಗುವುದರಲ್ಲಿತ್ತು. ಆದರೆ ಶ್ರೀಲಂಕಾ ಬೌಲರ್ ಗಳು ಆಫ್ರಿಕನ್ನರನ್ನು 21 ಓವರ್ ಗಳಲ್ಲಿ 9 ವಿಕೆಟ್ ಉರುಳಿಸಿ 187 ರನ್ ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ'ಕಾಕ್ 23 (13), ಜೆಪಿ ಡುಮಿನಿ 38 (23), ಹಾಶೀಮ್ ಆಮ್ಲ 40 (23) ರನ್ ಬಾರಿಸಿ ಆಫ್ರಿಕಾವನ್ನು ಗೆಲುವಿನೆಡೆಗೆ ಸೆಳೆದಿದ್ದರು. ಆದರೆ ಅಂತಿಮವಾಗಿ ದಕ್ಷಿಣ ಆಫ್ರಿಕಾ 3 ರನ್ ಗಳಿಂದ ಶ್ರೀಲಂಕಾ ಎದುರು ಶರಣಾಯಿತು.
ಶ್ರೀಲಂಕಾ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾದ ದಾಸುನ್ ಶಾನಕ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.