ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ಬ್ರಿಸ್ಬೇನ್ ಅಂಗಳ ಸಾಕ್ಷಿಯಾಗಿದೆ. ಹಲವು ಮಹತ್ವದ ಪಂದ್ಯಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಅಂಗಳದಲ್ಲಿ ಟೀಮ್ ಇಂಡಿಯಾ ಆಟಗಾರರು ಆರ್ಭಟ ನಡೆಸಿದ್ದಾರೆ. ವಿದೇಶಿ ನೆಲದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ವೀರರಂತೆ ಮೆರೆದಿದ್ದಾರೆ. ಗಬ್ಬಾದ ಖ್ಯಾತ ಮೈದಾನದಲ್ಲಿ ಟೀಮ್ ಇಂಡಿಯಾ ಪರ ಅಮೋಘ ಇನಿಂಗ್ಸ್ ಕಟ್ಟಿದ ಆಟಗಾರರ ಪಟ್ಟಿ ಇಲ್ಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳು ಮುಗಿದಿವೆ. ಈ ಸರಣಿಯಲ್ಲಿ ಭಾರತ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದ್ದರೆ, ಆಸೀಸ್ ಎರಡನೇ ಪಂದ್ಯವನ್ನು 10 ವಿಕೆಟ್‌ಗಳಿಂದ ಜಯ ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಸೆ ಟೀಮ್ ಇಂಡಿಯಾದ್ದಾಗಿದೆ. ಇದೇ ವೇಳೆ ಬ್ರಿಸ್ಬೇನ್ ಅಂಗಳದಲ್ಲಿ ನಡೆಯಲಿರುವ ಐತಿಹಾಸಿಕ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ.

ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಹ ಟೀಮ್ ಇಂಡಿಯಾ ಗಬ್ಬಾ ಅಂಗಳದಲ್ಲಿ ಒಂದು ಪಂದ್ಯವನ್ನು ಆಡಿತ್ತು. ಆ ಪಂದ್ಯ ಡಿಸೈಡರ್ ಆಗಿತ್ತು. ನಾಲ್ಕನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದವರು, ರಿಷಭ್ ಪಂತ್. ಟೀಮ್ ಇಂಡಿಯಾ ಸವಾಲಿನ ಗುರಿಯನ್ನು ಬೆನ್ನಟ್ಟಿದಾಗ ಪಂತ್ ಆಡಿದ 89 ರನ್‌ಗಳ ಇನಿಂಗ್ಸ್ ಯಾವುದೇ ಶತಕಕ್ಕೂ ಕಡಿಮೆ ಏನು ಇರಲಿಲ್ಲ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸುತ್ತಿದ್ದಂತೆ ಇವರು ಹೀರೋ ರೀತಿ ಮಿಂಚಿದರು. ಇವರ ಅಮೋಘ ಆಟದ ಪ್ರಭಾವದಿಂದಲೇ ಟೀಮ್ ಇಂಡಿಯಾ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಯಿತು.
ಬ್ರಿಸ್ಬೇನ್ ಅಂಗಳದಲ್ಲಿ ನಾಲ್ಕು ಭಾರತೀಯ ಬ್ಯಾಟ್ಸ್‌ಮನ್‌ಗಳು ಮೂರಂಕಿ ಮುಟ್ಟಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಎಂಎಲ್ ಜೈಸಿಂಹ, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ ಮತ್ತು ಮುರಳಿ ವಿಜಯ್ ಮಾತ್ರ ಗಬ್ಬಾ ಮೈದಾನದಲ್ಲಿ ಟೆಸ್ಟ್ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಮೊದಲ ಶತಕ ಈ ಅಂಗಳದಲ್ಲಿ 1968 ರಲ್ಲಿ ದಾಖಲಾಗಿತ್ತು. ಆಗ ಎಂಎಲ್ ಜೈಸಿಂಹ 101 ರನ್ ಸಿಡಿಸಿದ್ದರು.

ಇದೇ ಸಾಧನೆಯನ್ನು 1977ರಲ್ಲಿ ಟೀಮ್ ಇಂಡಿಯಾದ ಲೆಜೆಂಡ್ ಬ್ಯಾಟರ್ ಸುನಿಲ್ ಗವಾಸ್ಕರ್ ಮಾಡಿದ್ದರು. ಇವರು 113 ರನ್ ಬಾರಿಸಿದ್ದರು. 2003ರಲ್ಲಿ ಸೌರವ್ ಗಂಗೂಲಿ 144 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದ್ದರು. 2014ರಲ್ಲಿ ಈ ಮೈದಾನದಲ್ಲಿ ಮುರಳಿ ವಿಜಯ್ 144 ರನ್ ಗಳ ಇನಿಂಗ್ಸ್ ಆಡಿ ಎಲ್ಲರ ಚಿತ್ತ ಕದಿದ್ದರು.
ಗಾಬಾ ಮೈದಾನದಲ್ಲಿ ಶತಕ ಬಾರಿಸಿದ ಬ್ಯಾಟರ್‌ಗಳು ನಿವೃತ್ತರಾಗಿದ್ದಾರೆ. ಹತ್ತು ವರ್ಷಗಳಿಂದ ಈ ಅಂಗಳದಲ್ಲಿ ಯಾವುದೇ ಭಾರತೀಯ ಬ್ಯಾಟರ್ ಶತಕ ಬಾರಿಸಿ ಸಂಭ್ರಮಿಸಿಲ್ಲ. ಭಾರತ ತಂಡ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಐದು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದೆ. ಒಂದು ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ.