ಐಪಿಎಲ್ ಕ್ರೇಜ್ ಈ ಬಾರಿ ಪಂದ್ಯಗಳು ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ಐಪಿಎಲ್ 2025 ಹರಾಜು. ಬಿಸಿಸಿಐ, ಐಪಿಎಲ್ ಮಾಲೀಕರಿಗೆ ಒಟ್ಟು ಆರು ಆಟಗಾರರನ್ನು ಉಳಿಸಿಕೊಳ್ಳುವಂತೆ ಸೂಚಿಸಿತ್ತು. ಅದರಲ್ಲಿ ಗರಿಷ್ಠ ಇಬ್ಬರು ವಿದೇಶಿ ಹಾಗೂ ಇಬ್ಬರು ಅನ್‌ಕ್ಯಾಪ್ಡ್ ಪ್ಲೇಯರ್ಸ್‌ಗಳು ಸೇರಿದ್ದಾರೆ. ಮಾಲೀಕರು ಕಳೆದ ಆವೃತ್ತಿಯ ಫಾರ್ಮ್ ಹಾಗೂ ಆಟಗಾರರ ಸದ್ಯದ ಫಾರ್ಮ್ ಪರಿಗಣಿಸಿ ತಮ್ಮ ತಂಡದಲ್ಲಿ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಆರ್‌ಸಿಬಿ ಸಹ ಈ ಬಾರಿ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ಈ ಬಾರಿಯ ಹರಾಜಿಗೆ ಮಾಲೀಕರ ಪರ್ಸ್ ಸೈಜ್ ಸಹ ಬಿಸಿಸಿಐ ಹೆಚ್ಚಿಸಿತ್ತು. ಈ ಬಾರಿಯ ಹರಾಜಿನಲ್ಲಿ ಎಲ್ಲ ತಂಡಗಳು ಗರಿಷ್ಠ 120 ಕೋಟಿ ರೂಪಾಯಿ ಹೊಂದಿವೆ. ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಒಟ್ಟು 83 ಕೋಟಿ ರೂಪಾಯಿ ಹೊಂದಿದೆ. ಏಕೆಂದರೆ ಮೂರು ಆಟಗಾರರಿಗೆ ಬೆಂಗಳೂರು ತಂಡ 37 ಕೋಟಿ ರೂಪಾಯಿ ನೀಡಿದೆ. ಉಳಿದ 83 ಕೋಟಿಯಲ್ಲಿ ಗರಿಷ್ಠ 23 ಆಟಗಾರರನ್ನು ಕೊಳ್ಳುವ ಅನಿವಾರ್ಯತೆ ಇದೆ.

ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವ ಮಹದಾಸೆಯನ್ನು ಸಫಲವಾಗಿಸುವ ನಿಟ್ಟಿನಲ್ಲಿ ತಂಡ ಕಟ್ಟಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಆಟಗಾರರಿಗೆ ಆರ್‌ಸಿಬಿ ಬಾಜಿ ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರನ್ನು ಸಹ ಟಾರ್ಗೆಟ್ ಮಾಡಲಿದೆ. ಆ ಪ್ಲೇಯರ್ಸ್ ಪಟ್ಟಿ ಇಲ್ಲಿದೆ.
ಆರ್‌ಸಿಬಿ ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಒಬ್ಬ ಸಾಥಿಯನ್ನು ಹುಡುಕಾಟ ನಡೆಸಿದೆ. ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಪ್ಲೇಯರ್ಸ್‌ಗಳು ಎದ್ದು ಕಾಣುತ್ತಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈ ಬಿಡಲಾಗಿರುವ ಕ್ವಿಂಟನ್ ಡಿಕಾಕ್ ಹಾಗೂ ಸದ್ಯ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಿರುವ ರಯಾನ್ ರಿಕಲ್ಟನ್ ಅವರಿಗೆ ಬೆಂಗಳೂರು ಬಾಜಿ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಈ ಇಬ್ಬರೂ ಆಟಗಾರರು ಎಡಗೈ ಆಟಗಾರರಾಗಿದ್ದಾರೆ.
ಕ್ವಿಂಟನ್ ಡಿಕಾಕ್ ಅವರಿಗೆ ಭಾರತದಲ್ಲಿ ಆಡಿದ ಅನುಭವ ಹೆಚ್ಚಿದೆ. ಹೀಗಾಗಿ ಆರ್‌ಸಿಬಿ ಇವರನ್ನು ಟಾರ್ಗೆಟ್ ಮಾಡಲಿದೆ. ಡಿಕಾಕ್ ಈಗಾಗಲೇ ಐಪಿಎಲ್‌ನಲ್ಲಿ 107 ಪಂದ್ಯಗಳನ್ನು ಆಡಿದ್ದು, 134.23ರ ಸರಾಸರಿಯಲ್ಲಿ 3157 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 23 ಅರ್ಧಶತಕಗಳು ಸೇರಿವೆ. ಇನ್ನು 29 ವರ್ಷದ ಆಟಗಾರ ರಯಾನ್ ರಿಕಲ್ಟನ್ 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು 139 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಬಲ್ಲ ಪ್ಲೇಯರ್.

ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅವರ ಬ್ಯಾಟಿಂಗ್ ಹೋಲುವ ಯುವ ಆಟಗಾರ ಡೆವಾಲ್ಡ್ ಬ್ರೇವಿಸ್ ಐಪಿಎಲ್‌ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. 2022ರಲ್ಲಿ ಇವರು ಐಪಿಎಲ್‌ಗೆ ಇವರು ಪದಾರ್ಪಣೆ ಮಾಡಿದರು. ಆದರೆ ಇಲ್ಲಿಯ ವರೆಗೆ ಇವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಇವರು ಆಡಿರುವ 10 ಪಂದ್ಯಗಳಲ್ಲಿ 133ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಬಲ್ಲರು. ಇವರು ಒಬ್ಬ ಮಿಡ್ಲ್ ಆರ್ಡರ್ ಬ್ಯಾಟರ್. ಆರ್‌ಸಿಬಿ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳಲು ಇವರಿಗೆ ಗಾಳ ಹಾಕಬಹುದು.
ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ದೃಷ್ಟಿಯಿಂದ ದಕ್ಷಿಣ ಆಫ್ರಿಕಾದ ಇಬ್ಬರು ಸ್ಟಾರ್ ವೇಗಿಗಾಳದ ಕಗಿಸೋ ರಬಾಡ ಹಾಗೂ ಮಾರ್ಕೊ ಜಾನ್ಸೆನ್ ಅವರಿಗೆ ಹಣದ ಹೊಳೆಯನ್ನು ಹರಿಸಬಲ್ಲದು. ರಬಾಡಾ ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಿದ ಆಟಗಾರ. ಇವರು ಆಡಿದ 80 ಪಂದ್ಯಗಳಲ್ಲಿ 117 ವಿಕೆಟ್ ಕಬಳಿಸಿದ್ದಾರೆ. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿದೆ.

ದಕ್ಷಿಣ ಆಫ್ರಿಕಾದ ಇನ್ನೊಬ್ಬ ವೇಗಿ ಮಾರ್ಕೊ ಜಾನ್ಸೆನ್ ಅವರಿಗೆ ಆರ್‌ಸಿಬಿ ಹಣವನ್ನು ಹೂಡಬಹುದು. ಇವರು ಸಹ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ. ಈಗಾಗಲೇ ಆಡಿದ 21 ಪಂದ್ಯಗಳಲ್ಲಿ ಮಾರ್ಕೊ 20 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲಾ ಇವರಲ್ಲಿ ಬ್ಯಾಟಿಂಗ್ ಮಾಡುವ ಕಲೆ ಸಹ ಇದೆ ಎಂದು ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸಾಬೀತು ಪಡಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಮಾರ್ಕೋ 17 ಎಸೆತಗಳಲ್ಲಿ 54 ರನ್ ಸಿಡಿಸಿದ್ದಾರೆ.