
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಸದಸ್ಯ ಹನುಮ ವಿಹಾರಿ, ಅಭಿಮನ್ಯು ಈಶ್ವರನ್ ಸೇರಿದಂತೆ ಒಟ್ಟು 7 ಭಾರತೀಯ ಆಟಗಾರರು 2021-22ನೇ ಸಾಲಿನ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಹನುಮ ವಿಹಾರಿ ಇತ್ತೀಚೆಗಷ್ಟೇ ಅಂತ್ಯವಾದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಬಾಂಗ್ಲಾದೇಶದ ಲಿಸ್ಟ್ ಎ ಟೂರ್ನಮೆಂಟ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಈಗಾಗಲೇ ಈ ಎಲ್ಲಾ ಆಟಗಾರರು ಬಿಸಿಸಿಐನಿಂದ ಅನುಮತಿಯನ್ನು ಪಡೆದುಕೊಂಡಿದ್ದು ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ಸಜ್ಜಾಗಿದ್ದಾರೆ. ಹನುಮ ವಿಹಾರಿ ತಮ್ಮ ತವರು ಹೈದರಾಬಾದ್‌ನಿಂದ ಈ ವಾರಾಂತ್ಯದಲ್ಲಿ ಬಾಂಗ್ಲಾದೇಶದ ಢಾಕಾಗೆ ಪ್ರಯಾಣ ಬೆಳೆಸಲಿದ್ದು ಅಬಹಾನಿ ಲಿಮಿಟೆಡ್ ತಂಡದ ಪರವಾಗಿ ಆಡಲಿದ್ದಾರೆ. ಹನುಮ ವಿಹಾರಿ ಈ ಬಾರಿಯ ಆವೃತ್ತಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದು ಅವರ ಸ್ಥಾನದಲ್ಲಿ ಮೂರು ಪಂದ್ಯಗಳಲ್ಲಿ ಆಡಲು ಅಫ್ಘಾನಿಸ್ತಾನದ ಆಟಗಾರ ನಜೀಬುಲ್ಲಾ ಜಡ್ರಾನ್ ಒಪ್ಪಂದ ಮಾಡಿಕೊಮಡಿದ್ದಾರೆ.
ಇನ್ನು ರಣಜಿಯಲ್ಲಿ ಬೆಂಗಾಲ್ ತಂಡವನ್ನು ಮುನ್ನಡೆಸುವ ಅಭಿಮನ್ಯು ಈಶ್ವರನ್ ಪ್ರೈಮ್ ಬ್ಯಾಂಕ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಆಟಗಾರರಲ್ಲದೆ ದೇಶೀಯ ಕ್ರಿಕೆಟ್‌ನ ಆಟಗಾರರಾದ ಪರ್ವೇಜ್ ರಸೂಲ್, ಬಾಬಾ ಅಪರಾಜಿತ್, ಚಿರಾಗ್ ಜಾನಿ, ಅಶೋಕ್ ಮೆನಾರಿಯಾ ಮತ್ತು ಗುರಿಂದರ್ ಸಿಂಗ್ ಕೂಡ ಢಾಕಾ ಪ್ರೀಮಿಯರ್ ಲೀಗ್‌ನ 2021-22ರ ಆವೃತ್ತಿಯಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದ ಪರವಾಗಿ ಒಂದು ಏಕದಿನ ಹಾಗೂ ಒಂದು ಟಿ20 ಪಂದ್ಯದಲ್ಲಿ ಆಡಿರುವ ರಸೂಲ್ ಶೇಕ್ ಜಮಲ್ ಧನ್ಮೊಂಡಿ ತಂಡದ ಫ್ರಾಂಚೈಸಿಯನ್ನು ಪ್ರತಿನಿಧಿಸಲಿದ್ದಾರೆ.
ತಮಿಳುನಾಡಿನ ಬ್ಯಾಟರ್ ಬಾಬಾ ಅಪರಾಜಿತ್ ಅವರು ರೂಪಗಂಜ್ ಟೈಗರ್ಸ್‌ಪರವಾಗಿ ಕಣಕ್ಕಿಳಿದರೆ, ಈ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ಗಾಗಿ ಆಡಿದ್ದ ಮೆನಾರಿಯಾ ಖೇಲಾಘರ್ ಪರ ಆಡಲಿದ್ದಾರೆ. ಜಾನಿ ಲೆಜೆಂಡ್ಸ್ ಆಫ್ ರೂಪಗಂಜ್ ಪರವಾಗಿ ಆಡಿದರೆ ಗುರಿಂದರ್ ಗಾಜಿ ಗ್ರೂಪ್ ಕ್ರಿಕೆಟರ್ಸ್ ತಂಡದ ಭಾಗವಾಗಲಿದ್ದಾರೆ. ಈ ಆಟಗಾರರ ಪೈಕಿ ಜಾನಿ ಹಾಗೂ ಗುರಿಂದರ್ ಮಾತ್ರ ಈ ಬಾರಿ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಉಳಿದ ಎಲ್ಲಾ ಆಟಗಾರರು ಕೂಡ ಈ ಹಿಂದೆಯೂ ಈ ಟೂರ್ನಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಡಾಕಾ ಪ್ರೀಮಿಯರ್ ಲೀಗ್ 50 ಓವರ್‌ಗಳ ಕ್ರಿಕೆಟ್ ಟೂರ್ನಿಯಾಗಿದ್ದು ಒಟ್ಟು 11 ತಂಡಗಳು ಮುಖಾಮುಖಿಯಾಗಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳು ಸೂಪರ್ ಲೀಗ್ ಹಂತಕ್ಕೇರಲಿದೆ. ಈ ಹಂತದಲ್ಲಿ ಎಲ್ಲಾ ತಂಡಗಳು ಒಂದೊಂದು ಬಾರಿ ಮುಖಾಮುಖಿಯಾಗಲಿದೆ.