ಇಂಗ್ಲೆಂಡ್-ಭಾರತ ಏಕದಿನ ಸರಣಿ: ಭಾರತ ಸೋಲಲು ಏಳು ಕಾರಣಗಳು
ಲೀಡ್ಸ್, ಜುಲೈ 18: ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಮಹತ್ವದ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಆ ಮೂಲಕ ಸರಣಿ ಗೆಲ್ಲಲು ಇದ್ದ ಅವಕಾಶವನ್ನು ಇಂಗ್ಲೆಂಡ್ ಮಡಿಲಿಗೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಿಗೆ 256 ರನ್‌ಗಳಿಸಲಷ್ಟೆ ಶಕ್ತವಾಯಿತು. ಗುರಿ ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಇನ್ನೂ 5.3 ಓವರ್‌ಗಳು ಬಾಕಿ ಇದ್ದಂತೆ 8 ವಿಕೆಟ್‌ಗಳ ಭರ್ಜರಿ ಜಯಗಳಿಸಿತು.
ಮೊದಲ ಪಂದ್ಯದಲ್ಲಿ ಗೆದ್ದು ಬೀಗಿ ಸರಣಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಭಾರತ ಕೊನೆಯ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲುಕಂಡಿತು. ಭಾರತ ತಂಡ ಮೈದಾನದ ಒಳಗೆ ಹಾಗೂ ತಂಡದ ಆಯ್ಕೆಯಲ್ಲಿ ಮಾಡಿದ ಪ್ರಮಾದಗಳು ಸರಣಿ ಕೈತಪ್ಪಲು ಪ್ರಮುಖ ಕಾರಣಗಳಾದವು.
ಭಾರತ ನಿನ್ನೆಯ ಮಹತ್ವದ ಪಂದ್ಯದಲ್ಲಿ ಸೋಲಲು ಪ್ರಮುಖ ಕಾರಣಗಳ ಪಟ್ಟಿ ಇಲ್ಲಿದೆ ಒಮ್ಮೆ ಕಣ್ಣಾಡಿಸಿ...

ಕೆ.ಎಲ್.ರಾಹುಲ್ ಕೈಬಿಟ್ಟು ಯಡವಟ್ಟು
ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ನನ್ನು ಆಡುವ 11 ಮಂದಿಯ ತಂಡದಿಂದ ಕೈಬಿಟ್ಟು ಕೊಹ್ಲಿ ಮೊದಲ ತಪ್ಪು ಮಾಡಿದರು. ಕೆ.ಎಲ್.ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಈಗಾಗಲೇ ಆಟಗಾರನಾಗಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶನವನ್ನು ಇಂಗ್ಲೆಂಡ್ ನೆಲದಲ್ಲೇ ಮಾಡಿದ್ದರೂ ಆದರೂ ಅವರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ ಅವರನ್ನು ಸೇರಿಸಿಕೊಳ್ಳಲಾಯಿತು.

ನಿಧಾನದ ಗತಿಯ ಆರಂಭ
ಆರಂಭದ ಪಂದ್ಯದಲ್ಲಿ ಗುಡುಗಿದ್ದ ರೋಹಿತ್ ಶರ್ಮಾ ಕೊನೆಯ ಪಂದ್ಯದಲ್ಲಿ ರನ್ ಗಳಿಸಲು ವಿಪರೀತವಾಗಿ ತಡವರಿಸಿದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ ನಿನ್ನೆಯ ಪಂದ್ಯದಲ್ಲಿ 16 ಬಾಲ್ ಎದುರಿಸಿ ಗಳಿಸಿದ್ದು 2 ರನ್ ಮಾತ್ರ. ಭಾರತವು ಅತ್ಯಂತ ನಿಧಾನಗತಿಯಲ್ಲಿ ಆರಂಭ ಪಡೆಯಲು ಇದು ಪ್ರಮುಖ ಕಾರಣವಾಯಿತು. ರನ್ ವೇಗ ಹೆಚ್ಚಿಸಿಕೊಳ್ಳಬೇಕಾದ ಸಮಯದಲ್ಲಿ ನಿಧಾನವಾಗಿ ಆಡಿದ್ದು ತಂಡ ಅಂತಿಮ ಮೊತ್ತದ ಮೇಲೆ ಪರಿಣಾಮ ಬೀರಿತು.

ಮಧ್ಯಮ ಕ್ರಮಾಂಕದ ಕುಸಿತ
ಭಾರತದ ಮಧ್ಯಮ ಕ್ರಮಾಂಕ ಮತ್ತೆ ಕುಸಿತ ಕಂಡಿತು. ಸರಣಿಯುದ್ದಕ್ಕೂ ಈ ಕುಸಿತ ಕಾಣುತ್ತಲೇ ಇತ್ತು. ಅದು ಕೊನೆಯ ಪಂದ್ಯದಲ್ಲೂ ಮುಂದುವರೆಯಿತು. ಧೋನಿ ತೆವಳುತ್ತಾ 66 ಎಸೆತದಲ್ಲಿ 42 ರನ್ ಗಳಿಸಿದರಾದರೂ ಪ್ರಮುಖ ಘಟ್ಟದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮಕ್ರಮಾಂಕಕ್ಕೆ ಬಲ ತುಂಬಲೆಂದೇ ಆಯ್ಕೆಯಾಗಿದ್ದ ದಿನೇಶ್ ಕಾರ್ತಿಕ್ 21 ರನ್ ಗಳಿಸಷ್ಟೇ ಶಕ್ತರಾದರು. ಇನ್ನು ಸುರೇಶ್ ರೈನಾರ ಕಳಪೆ ಫಾರ್ಮ್ ಮುಂದುವರೆದು ಕೇವಲ 1 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಕೂಡ 21 ರನ್ ಗಳಿಸಿ ಔಟಾಗಿ ಹೊರನಡೆದರು. ಮಧ್ಯಮ ಕ್ರಮಾಂಕದ ಯಾರೊಬ್ಬರೂ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸದಿದ್ದದು ತಂಡದ ಸೋಲಿಗೆ ಪ್ರಮುಖ ಕಾರಣ.

ನೀರಸ ಫೀಲ್ಡಿಂಗ್ ಪ್ರದರ್ಶನ
ವಿಶ್ವದರ್ಜೆಯ ಫೀಲ್ಡಿಂಗ್ ತಂಡ ಎಂಬ ಹೆಸರಾಂಕಿತ ಭಾರತ ತಂಡ ನಿನ್ನೆಯ ಪಂದ್ಯದಲ್ಲಿ ಅಷ್ಟೇನು ಉತ್ತಮ ಫೀಲ್ಡಿಂಗ್ ಪ್ರದರ್ಶಿಸಲಿಲ್ಲ. ಆರಂಭಿಕ ಹಂತದಲ್ಲಿ ಹಲವು ಬೌಂಡರಿಗಳನ್ನು ಬಿಟ್ಟುಕೊಟ್ಟರು. ಆದರೆ ಎದುರಾಳಿ ತಂಡ ಅತ್ಯುತ್ತಮ ಫೀಲ್ಡಿಂಗ್ ಅನ್ನು ಪ್ರದರ್ಶಿಸಿ ಮೇಲುಗೈ ಸಾಧಿಸಿತು. ಮೊದಲ 10 ಓವರ್‌ಗಳಲ್ಲಿ ಭಾರತ ಗಳಿಸಿದ್ದು ಕೇವಲ 32 ರನ್.

ಸ್ಪಿನ್ನರ್‌ಗಳ ಮೇಲೆ ಅತಿಯಾದ ವಿಶ್ವಾಸ
ಮೊದಲ ಪಂದ್ಯದಲ್ಲಿ ಗೆಲುವು ತಂದು ಕೊಟ್ಟಿದ್ದ ಸ್ಪಿನ್ನರ್ ದ್ವಯರಾದ ಕುಲದೀಪ್ ಹಾಗೂ ವಿಜಯೇಂದ್ರ ಚಾಹಲ್ ಮೇಲೆ ಅತಿಯಾದ ವಿಶ್ವಾಸ ಇಡಲಾಗಿತ್ತು. ಆದರೆ ಅವರಿಬ್ಬರೂ ಸಹ ನಿರಾಸೆ ಮೂಡಿಸಿದರು. ಅದೇ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಷೀದ್ ಉತ್ತಮ ಪ್ರದರ್ಶನವನ್ನೇ ತೋರಿ ಪಂದ್ಯ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು. ನಾಯಕ ಕೊಹ್ಲಿ ಕೂಡ ಅತಿಯಾಗಿ ಸ್ಪಿನ್ನರ್‌ಗಳನ್ನು ನಂಬಿ ಕೆಟ್ಟರು.

ಬೌಲರ್‌ಗಳ ವೈಫಲ್ಯ
ಭಾರತದ ಬೌಲರ್‌ಗಳ ಒಟ್ಟಾರೆ ವೈಫಲ್ಯ ತಂಡ ಸೋಲಲು ಪ್ರಮುಖ ಕಾರಣಗಳಲ್ಲೊಂದು. ಆರು ಬೌಲರ್‌ಗಳು ಬೌಲಿಂಗ್ ಮಾಡಿದರೂ ತೆಗೆದದ್ದು ಒಂದು ವಿಕೆಟ್ ಮಾತ್ರ. ಮತ್ತೊಂದು ವಿಕೆಟ್ ಬಂದದ್ದು ರನ್‌ಔಟ್‌ನಿಂದ. ಭರವಸೆ ಇರಿಸಿದ್ದ ಸ್ಪಿನ್ನರ್‌ಗಳು ಸಂಪೂರ್ಣ ವಿಫಲರಾದರು. ವೇಗದ ಬೌಲರ್‌ಗಳಂತೂ ಇಡೀಯ ಸರಣಿಯಲ್ಲಿ ಹೇಳಿಕೊಳ್ಳುವಂತಹಾ ಪ್ರದರ್ಶನ ನೀಡಲೇ ಇಲ್ಲ. ಆದರೆ ಅದೇ ಇಂಗ್ಲೆಂಡ್ ತಂಡದ ವೇಗದ ಬೌಲರ್ ವೆಲ್ಲಿ 3 ವಿಕೆಟ್ ಗಳಿಸಿ ಮಿಂಚಿದರು. ಸ್ಪಿನ್ನರ್ ರಷೀದ್ ಸಹ 3 ವಿಕೆಟ್ ಪಡೆದರು. ಎರಡೂ ತಂಡದ ಬೌಲಿಂಗ್ ದಾಳಿಯಲ್ಲಿನ ಅಂತರವನ್ನು ಈ ಅಂಕಿ-ಅಂಶವೇ ಹೇಳುತ್ತದೆ.

ರೂಟ್ ಮತ್ತು ಮಾರ್ಗನ್ ಅದ್ಭುತ ಜೊತೆಯಾಟ
ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಸಮಾಧಾನದಿಂದ ಆಡಿದ ಇಬ್ಬರೂ ಬಹಳ ಎಚ್ಚರಿಕೆಯಿಂದ ಭಾರತದ ಬೌಲಿಂಗ್ ಅನ್ನು ಎದುರಿಸಿದರು. ರೂಟ್ 120 ಎಸೆತದಲ್ಲಿ ಬರೋಬ್ಬರಿ 100 ರನ್ ಗಳಿಸಿದರೆ. ಇಯಾನ್ ಮಾರ್ಗನ್ 108 ಎಸೆತಕ್ಕೆ 88 ರನ್ ಗಳಿಸಿ ಇಬ್ಬರೂ ಅಜೇಯರಾಗಿ ಉಳಿದರು. ಆರಂಭದಲ್ಲಿ ನಿಧಾನವಾಗಿ ಆಡಿ ಪಿಚ್ ಹಾಗೂ ಬೌಲಿಂಗ್‌ಗೆ ಒಗ್ಗಿಕೊಂಡ ಇವರು ಆ ನಂತರ ಸ್ಟ್ರೈಕ್ ರೊಟೇಟ್ ಮಾಡುತ್ತಾ ಗೆಲುವನ್ನು ಸುಲಭವಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications