
ದುಬೈ, ಸೆಪ್ಟೆಂಬರ್ 26: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ 5ನೇ ಪಂದ್ಯದ ವೇಳೆ ಕಣ್ಣೀರಿಟ್ಟ ಮಗುವಿನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟೈಗೊಂಡ ಈ ರೋಚಕ ಪಂದ್ಯದ ವೇಳೆ ಮಗುವೊಂದು ಅಳುತ್ತಿರುವ ಚಿತ್ರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು.
ಸೆಪ್ಟೆಂಬರ್ 25ರ ಮಂಗಳವಾರ ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ರೋಚಕ ಪಂದ್ಯದಲ್ಲಿ ಭಾರತ ಗೆಲ್ಲುವ ತಂಡವನ್ನು ಟೈ ಗೊಳಿಸಿಕೊಂಡಿತ್ತು. ಕ್ರಿಕೆಟ್ ಆಟದ ಬಗ್ಗೆ ಪ್ರೀತಿ-ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಪುಟ್ಟ ಮಗುವೊಂದು ಪಂದ್ಯ ಮುಗಿಯುತ್ತಲೇ ಗೋಳೋ ಎಂದು ಅಳಹತ್ತಿತ್ತು.

ಚಿತ್ರದಲ್ಲಿ: ಅತ್ತ ಮಗುವಿನ ಜೊತೆ ಪ್ರೀತಿ-ಖುಷಿ ಹಂಚಿಕೊಂಡ ಅಫ್ಘಾನ್ ಸ್ಟಾರ್ ರಶೀದ್ ಖಾನ್ ಮತ್ತು ಶತಕದ ಸರದಾರ ಮೊಹಮ್ಮದ್ ಶಹಝಾದ್.
ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಆಟವನ್ನು ವೀಕ್ಷಿಸುತ್ತ ಕಾಯುತ್ತಿದ್ದ ಮುದ್ದು ಮಗು ಪಂದ್ಯ ಮುಗಿಯುತ್ತಲೇ ಭಾರತ ಸೋತಿತು ಅಂದುಕೊಂಡಿತೋ ಏನೋ. ಹೀಗಾಗಿ ಪುಟಾಣಿ ಕಣ್ಣೀರು ಹಾಕಹತ್ತಿತ್ತು. ಮಗುವಿನ ಮುಗ್ಧತೆಗೆ ಮನಸೋತ ಕ್ರಿಕೆಟ್ ಅಭಿಮಾನಿಗಳೆಲ್ಲ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಭಾರತ vs ಅಫ್ಘಾನಿಸ್ತಾನ ತಂಡಗಳ ನಡುವಿನ ರೋಚಕ ಕಾದಾಟ 252 ರನ್ ನಿಂದ ಸಮಬಲಗೊಂಡಿತ್ತು. ಅಫ್ಘಾನಿಸ್ತಾನ ಪರ ಮೊಹಮ್ಮದ್ ಶಹಝಾದ್ 124 ರನ್ ಸಿಡಿಸಿ ಭಾರತಕ್ಕೆ ಅಫ್ಘಾನ್ ಸವಾಲಿನ ಮೊತ್ತ ನೀಡುವಂತೆ ನೋಡಿಕೊಂಡಿದ್ದರೆ, ಸೋತಿತು ಎನ್ನುವ ಪಂದ್ಯವನ್ನು ಭಾರತದ ರವೀಂದ್ರ ಜಡೇಜ ಟೈ ಗೊಳಿಸಿಕೊಟ್ಟಿದ್ದರು. ಆದರೆ ಮುದ್ದು ಮಗುವಿಗೆ ಒಮ್ಮೆಲೆ ಇವೆಲ್ಲ ಹೇಗೆ ಅರ್ಥಾಗಬೇಕು?