ಜೂನ್ 2 ಭಾನುವಾರ, 2024ರ ಟಿ 20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್‌ಎ ತಂಡ ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಕೆನಡಾ ನೀಡಿದ 195 ರನ್‌ಗಳ ಕಠಿಣ ಗುರಿಯನ್ನು 17.4 ಓವರ್‌ಗಳಲ್ಲಿ ಯುಎಸ್‌ಎ ಯಶಸ್ವಿಯಾಗಿ ಬೆನ್ನಟ್ಟಿದೆ.
ಈ ಗೆಲುವಿನ ಮುಖ್ಯ ರೂವಾರಿರಾದ ಆರನ್ ಜೋನ್ಸ್ ಅವರು ಸ್ಪೋಟಕ ಬ್ಯಾಟಿಂಗ್ ಮಾಡಿದರು. ಪರಿಣಾಮ ಟಿ20 ವಿಶ್ವಕಪ್‌ನಲ್ಲಿ ಈ ಹಿಂದೆ ದಿಗ್ಗಜ ಬ್ಯಾಟರ್‌ಗಳ ದಾಖಲೆಗಳು ಪುಡಿ ಪುಡಿ ಆಗಿವೆ. ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ತನ್ನ ಮೊದಲ ಐತಿಹಾಸಿಕ ಜಯ ದಾಖಲಿಸಲು ಆರನ್ ಜೋನ್ಸ್ ಕಾರಣರಾಗಿದ್ದಾರೆ.

ಆರನ್ ಜೋನ್ಸ್ ಎದುರಿಸಿದ ಕೇವಲ 40 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. 235 ಸ್ಟ್ರೈಕ್ ರೇಟ್‌ನಲ್ಲಿ ಬೀಸಿದ ಜೋನ್ಸ್ ಬರೋಬ್ಬರಿ 10 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಮಾಜಿ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದರು.
ಟಿ20 ವಿಶ್ವಕಪ್‌ನ ಇನ್ನಿಂಗ್ಸ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾದರು. ಕ್ರಿಸ್ ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.
2007ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಸಿಕ್ಸರ್‌ಗಳನ್ನು ಹೊಡೆದಿದ್ದರು. ನಂತರ, 2016ರಲ್ಲಿ ತಮ್ಮ ದಾಖಲೆಯನ್ನು ಸುಧಾರಿಸಿಕೊಂಡು ಇಂಗ್ಲೆಂಡ್ ವಿರುದ್ಧ 11 ಸಿಕ್ಸರ್‌ಗಳನ್ನು ಗೇಲ್ ಬಾರಿಸಿ ದಾಖಲೆ ಬರೆದಿದ್ದರು.
ಅಮೋಘ ಆಟವಾಡಿದ ಆರನ್ ಜೋನ್ಸ್ ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿದ್ದಾರೆ. ಇದಕ್ಕೂ ಮೊದಲು ಚೇಸಿಂಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಜಸ್ಟಿನ್ ಕೆಂಪ್ ಹೆಸರಿನಲ್ಲಿತ್ತು.
2007 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 89* ರನ್ ಗಳಿಸಿದರು. ಇದಾದ ಬಳಿಕ ವಿರಾಟ್ ಕೊಹ್ಲಿ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 82* ಮತ್ತು 2022ರಲ್ಲಿ ಪಾಕಿಸ್ತಾನ ವಿರುದ್ಧ ಕೂಡ ಅಜೇಯ 82* ರನ್ ಗಳಿಸಿದ ಸಾಧನೆ ಮಾಡಿದ್ದರು.
94 - ಆರನ್ ಜೋನ್ಸ್ vs ಕೆನಡಾ, 2024
89* - ಜಸ್ಟಿನ್ ಕೆಂಪ್ vs ನ್ಯೂಜಿಲೆಂಡ್, 2007
85* - ಮರ್ಲಾನ್ ಸ್ಯಾಮ್ಯುಯೆಲ್ಸ್ vs ಇಂಗ್ಲೆಂಡ್, 2016
83 - ಜೋ ರೂಟ್ vs ಭಾರತ, 2016
82* - ಲೆಂಡ್ಲ್ ಸಿಮನ್ಸ್ vs ಭಾರತ, 2016
82* - ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ, 2016
82* - ವಿರಾಟ್ ಕೊಹ್ಲಿ vs ಪಾಕಿಸ್ತಾನ, 2022
ಆರನ್ ಜೋನ್ಸ್ ಮತ್ತು ಆಂಡ್ರೆಸ್ ಗೌಸ್ ನಾಲ್ಕನೇ ವಿಕೆಟ್‌ಗೆ 131 ರನ್‌ಗಳ ಜೊತೆಯಾಟವಾಡಿದರು. ಇದು ಟಿ20 ವಿಶ್ವಕಪ್‌ನಲ್ಲಿ 4ನೇ ಅಥವಾ ಕಡಿಮೆ ವಿಕೆಟ್‌ಗೆ ದಾಖಲಾದ ದೊಡ್ಡ ಜೊತೆಯಾಟವಾಗಿದೆ.
ಇದಕ್ಕೂ ಮುನ್ನ 2021ರಲ್ಲಿ ಶ್ರೀಲಂಕಾದ ವನಿಂದು ಹಸರಂಗಾ ಮತ್ತು ಪಾಥುಮ್ ನಿಸ್ಸಾಂಕಾ ಐರ್ಲೆಂಡ್ ವಿರುದ್ಧ 123 ರನ್‌ಗಳ ಜೊತೆಯಾಟ ನೀಡಿದ್ದರು. ಪಾಕಿಸ್ತಾನದ ಮಿಸ್ಬಾ-ಉಲ್-ಹಕ್ ಮತ್ತು ಶೋಯೆಬ್ ಮಲಿಕ್ 2007 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 119 ರನ್ ಗಳಿಸಿದ್ದರು.
2022ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಐರ್ಲೆಂಡ್‌ನ ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಅಜೇಯ 119 ರನ್ ಬಾರಿಸಿದ್ದರು. ಭಾರತದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 2022ರಲ್ಲಿ ಪಾಕಿಸ್ತಾನ ವಿರುದ್ಧ 113 ರನ್‌ಗಳ ಜೊತೆಯಾಟವಾಡಿದ್ದರು.