ವಿಶ್ವ ಕ್ರಿಕೆಟ್‌ನಲ್ಲಿ ಈಗ ಟಿ20 ಕ್ರಿಕೆಟ್ ಆಟ ತನ್ನದೇ ಆದ ಛಾಪು ಮೂಡಿಸಿದೆ. ಆದರೆ, ಈ ಕ್ರೀಡೆ ಪರಿಚಯವಾಗುವ ಮುನ್ನವೇ ಟೀಮ್ ಇಂಡಿಯಾ ಸೇರಿದಂತೆ ಹಲವು ದೇಶದ ಆಟಗಾರರು ಹೊಡಿ ಬಡಿ ಆಟದ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಇವರ ಸಾಲಿನಲ್ಲಿ ಟೀಮ್ ಇಂಡಿಯಾ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರುತ್ತಾರೆ. ಇವರಂತೆ ಶ್ರೀಲಂಕಾದ ಸನತ್ ಜಯಸೂರ್ಯ, ಪಾಕ್‌ನ ಶಾಹಿದ್ ಅಫ್ರಿದಿ, ಆಸೀಸ್‌ನ ಮ್ಯಾಥ್ಯೂ ಹೆಡನ್ ಹೊಡಿ ಬಡಿ ಆಟದ ಮೂಲಕ ಗಮನ ಸೆಳೆದವರು. ಆದರೆ ಈ ಆಟಕ್ಕೆ ರಾಯಭಾರಿ ಆರ್‌ಸಿಬಿ ತಂಡದ ಮಾಜಿ ಪ್ಲೇಯರ್ ಎಬಿಡಿ ವಿಲಿಯರ್ಸ್...
ಎಬಿಡಿ ವಿಲಿಯರ್ಸ್ ಮೂಲತಃ ದಕ್ಷಿಣ ಆಫ್ರಿಕಾದ ಆಟಗಾರ. ಆದರೆ ಅವರಿಗೆ ವಿಶ್ವದಲ್ಲೆಡೆ ಫ್ಯಾನ್ಸ್ ಇದ್ದಾರೆ. ಎಬಿಡಿ ಅವರ ಎರಡನೇ ತವರು ಎಂದು ಕರೆಯುವುದು ಬೆಂಗಳೂರನ್ನು. ಆರ್‌ಸಿಬಿ ತಂಡದ ಪರ ಆಡಿ, ಅಪಾರ ಅಭಿಮಾನಿಗಳನ್ನು ಹೊಂದಿರುವ ಎಬಿಡಿ ಆಟಕ್ಕೆ ಆರ್‌ಸಿಬಿ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

ಸಾಮಾನ್ಯವಾಗಿ ಎಬಿಡಿ ಎಂದು ಕರೆಯಲ್ಪಡುವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಫೆಬ್ರವರಿ 17 ರಂದು 40 ನೇ ವರ್ಷಕ್ಕೆ ಕಾಲಿಟ್ಟರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎಬಿ ಡಿವಿಲಿಯರ್ಸ್ ಅವರ ಕಾಲದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್. ಕಳೆದ ಕೆಲವು ವರ್ಷಗಳಲ್ಲಿ ಅವರ ನಿವೃತ್ತಿಯ ನಂತರ, ಜಗತ್ತು ಅವರ ಬ್ಯಾಟಿಂಗ್ ಅನ್ನು ಬಹಳಷ್ಟು ನೆನಪಿಸಿಕೊಳ್ಳುತ್ತದೆ. ಎಬಿ ಡಿವಿಲಿಯರ್ಸ್ ತನ್ನ ವಿಶಿಷ್ಟವಾದ ಹೊಡೆತಗಳನ್ನು ಆಡಲು ಹೆಸರುವಾಸಿ. ಅದಕ್ಕಾಗಿಯೇ ಅಭಿಮಾನಿಗಳು ಅವರನ್ನು ಮಿಸ್ಟರ್ 360 ಎಂದು ಕರೆಯುತ್ತಾರೆ.
ಡಿವಿಲಿಯರ್ಸ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಏಕಕಾಲದಲ್ಲಿ ಐವತ್ತು, ನೂರು ಮತ್ತು 150 ರನ್‌ಗಳನ್ನು ತಲುಪಿದ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋಟಿಗಟ್ಟಲೆ ಭಾರತೀಯರು ಅವರ ಅಭಿಮಾನಿಗಳು ಮತ್ತು ಅವರ ಬ್ಯಾಟಿಂಗ್ ವೀಕ್ಷಿಸಲು ಇಷ್ಟಪಡುತ್ತಾರೆ.

ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ 2015 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವೇಗದ ಶತಕವನ್ನು ಗಳಿಸುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. ಆ ಪಂದ್ಯದಲ್ಲಿ ಅವರು ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅವರು ತಮ್ಮ ಎಲ್ಲಾ 25 ಏಕದಿನ ಶತಕಗಳನ್ನು 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬಾರಿಸಿದ್ದಾರೆ. ಡಿವಿಲಿಯರ್ಸ್ 2015 ರ ವಿಶ್ವಕಪ್‌ನಲ್ಲಿ ಇವರು ಇತಿಹಾಸದಲ್ಲಿ ವೇಗವಾಗಿ 150 ರನ್ ಗಳಿಸಿ ಸದ್ದು ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 150 ರನ್‌ಗಳನ್ನು ದಾಟಿದ್ದರು.
ಆರ್‌ಸಿಬಿ ತಂಡದ ಆಪತ್‌ಬಾಂಧವ್ ಎಂದೇ ಕರೆಸಿಕೊಳ್ಳುವ ಎಬಿಡಿ, ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೂ ಸಹ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್.. ತಮ್ಮ ಬಿರುಗಾಳಿಯ ಬ್ಯಾಟಿಂಗ್‌ನಿಂದಲೇ ಆರ್‌ಸಿಬಿ ಪರ ಮಿಂಚಿದ ಆಟಗಾರ. ಮಿಡ್ಲ್ ಆರ್ಡರ್ ಹಾಗೂ ಟಾಪ್ ಆರ್ಡರ್‌ಗಳಲ್ಲಿ ಬ್ಯಾಟ್ ಮಾಡಿರುವ ಎಬಿಡಿ ರನ್‌ಗಳನ್ನು ಗುಡೆ ಹಾಕಿ ಮಿಂಚಿದ್ದಾರೆ. ಅಲ್ಲದೆ ಯಾವುದೇ ಎಸೆತಕ್ಕೂ ಇವರ ಬಳಿ ಉತ್ತರ ವಿತ್ತು.

ಡಿವಿಲಿಯರ್ಸ್ ಅವರಂತಹ ಆಟಗಾರನ ನಿವೃತ್ತಿಯ ನಂತರ, ಅವರ ತಂಡ ದಕ್ಷಿಣ ಆಫ್ರಿಕಾ ಅವರಿಗೆ ಇನ್ನೂ ಯಾವುದೇ ಬದಲಿ ಆಟಗಾರನನ್ನು ಹುಡುಕಲು ಸಾಧ್ಯವಾಗಲಿಲ್ಲ. ಅವರು ಏಕದಿನದಲ್ಲಿ 53.5 ಸರಾಸರಿಯಲ್ಲಿ 9597 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರು 53.5 ಸರಾಸರಿಯಲ್ಲಿ 8765 ರನ್‌ಗಳನ್ನು ಹೊಂದಿದ್ದಾರೆ. ಡಿವಿಲಿಯರ್ಸ್ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಐಪಿಎಲ್‌ನಲ್ಲಿ 5162 ರನ್ ಸಿಡಿಸಿದ್ದಾರೆ. ಡಿವಿಲಿಯರ್ಸ್ 1480 ದಿನಗಳ ಕಾಲ ಐಸಿಸಿಯ ODI ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದಾರೆ.