WCL 2025: ಎಬಿಡಿ ಹೊಡಿಬಡಿ ಆಟಕ್ಕೆ ಆಸೀಸ್ ತಬ್ಬಿಬ್ಬು: 39 ಎಸೆತಗಳಲ್ಲಿ ಶತಕ
ಲೀಡ್ಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ( WCL 2025 ) ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿರ್ಸ್ ಮತ್ತೊಮ್ಮೆ ಸ್ಫೋಟಿಸಿದ್ದಾರೆ. ಈ ಮೂಲಕ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ 41 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಎಬಿಡಿ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಬಿರುಸಿನ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಎಬಿಡಿ ಹಬ್ಬದೂಟನ್ನು ಉಣ ಬಡಿಸಿದ್ದಾರೆ.
ಟಾಸ್ ಗೆಲ್ಲುತ್ತಿದ್ದಂತೆ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ಜೆಜೆ ಸ್ಮಟ್ಸ್ ಹಾಗೂ ಎಬಿಡಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿತು. ಈ ಮೂಲಕ ಎಬಿಡಿ ತಮಗೆ ವಯಸ್ಸಾಗಿದೆ, ಆದರೆ ತಾನು ಈಗಲೂ ಹಳೆಯ ಖದರ್‌ನಲ್ಲಿ ಬ್ಯಾಟ್ ಮಾಡುವುದಾಗಿ ತೋರಿಸಿದ್ದಾರೆ.

ಮೊದಲ ವಿಕೆಟ್‌ಗೆ ಜೆಜೆ ಸ್ಮಟ್ಸ್ ಹಾಗೂ ಎಬಿಡಿ ಜೋಡಿ 13.3 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ 187 ರನ್ ಜೊತೆಯಾಟವನ್ನು ನೀಡಿತು. ಈ ಅಮೋಘ ಜೊತೆಯಾಟದಲ್ಲಿ ಸ್ಪೋಟಕ ಬ್ಯಾಟರ್ ಎಬಿಡಿ ಕಾಣಿಕೆ ಅಪಾರವಾಗಿತ್ತು. ಎಬಿಡಿ ಕೇವಲ 39 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ 46 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ಸಹಾಯದಿದ 123 ರನ್ ಸಿಡಿಸಿ ಔಟ್ ಆದರು.ಇವರ ಸ್ಫೋಟಕ ಆಟವನ್ನು ಕಂಡು ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದರು. ಜೆಜೆ ಸ್ಮಟ್ಸ್ 53 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 85 ರನ್ ಬಾರಿಸಿ ಔಟ್ ಆದರು.
ದಕ್ಷಿಣ ಆಫ್ರಿಕಾದ ಪರ ಜೆಪಿ ಡುಮಿನಿ 16 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 241 ರನ್ ಸಿಡಿಸಿತು. ಆಸೀಸ್ ಚಾಂಪಿಯನ್ಸ್ ತಂಡದ ಪರ ಪೀಟರ್ ಸಿಡ್ಲ್, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡದ 3 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಬ್ರೆಟ್ ಲಿ ಒಂದು ವಿಕೆಟ್ ಕಬಳಿಸಿದರು.
ಆಸ್ಟ್ರೇಲಿಯಾಗೆ ಸೋಲು
ಆಸ್ಟ್ರೇಲಿಯಾದ ಬ್ಯಾಟರ್‌ಗಳ ರನ್ ಕಲೆ ಹಾಕುವಲ್ಲಿ ವಿಫಲರಾದರು. ಬೆನ್ ಡಂಕ್ (15), ಕ್ಯಾಲಮ್ ಫರ್ಗುಸನ್ (15), ಪೀಟರ್ ಸಿಡ್ಲ್ (19) ಕೊಂಚ ದಕ್ಷಿಣ ಆಫ್ರಿಕಾ ಬೌಲರ್ಸ್‌ಗಳನ್ನು ಕಾಡಿದರು. ಬೆನ್ ಕಟಿಂಗ್ ಅಜೇಯ 59 ರನ್ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ದಕ್ಷಿಣ ಆಫ್ರಿಕಾದ ಪರ ಆರನ್ ಫಾಂಗಿಸೊ 4, ಇಮ್ರಾನ್ ತಾಹೀರ್ 3 ವಿಕೆಟ್ ಕಬಳಿಸಿದರು. ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನವನ್ನು ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications