ಸೌದಿ ಅರೆಬಿಯದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕನನ್ನು ಸೇರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಮೆಲ್ನೋಟಕ್ಕಂತೂ ಉತ್ತರ ಸಿಕ್ಕಿದೆ. ಆದರೆ ಈ ಬಗ್ಗೆ ಈಗ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಆರ್‌ಸಿಬಿ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಅವರಿಗೆ ಬಿಡ್ ಮಾಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆರ್‌ಸಿಬಿ ಈ ಮೂವರಿಗೂ ದೊಡ್ಡ ಮೊತ್ತದ ಬಿಡ್ ಮಾಡದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ತನ್ನ ಪ್ಲ್ಯಾನ್‌ನ್ನು ಸರಿಯಾಗಿ ಹರಾಜಿನಲ್ಲಿ ಕಾರ್ಯರೂಪಕ್ಕೆ ತಂದಿದೆ.

ಸೌದಿಯಲ್ಲಿ ನಡೆದ ಹರಾಜು ಮುಗಿದ ಬೆನ್ನಲ್ಲೆ ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುತ್ತಾರೆ ಎಂದು ತಿಳಿಸಿದ್ದಾರೆ. ತಮ್ಮ ಯುಟೂಬ್ ಚಾನೆಲ್‌ಗೆ ಮಾತನಾಡಿರುವ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಆರ್‌ಸಿಬಿ ಮುಂದಿನ ನಾಯಕನ ಬಗ್ಗೆ ಮಾತನಾಡಿರುವ ಎಬಿಡಿ, ವಿರಾಟ್ ಕೊಹ್ಲಿ ಅವರ ಹೆಗಲಿಗೆ ಈ ಬಾರಿ ಕ್ಯಾಪ್ಟನ್ ಶಿಪ್ ಬೀಳಲಿದೆ ಎಂದು ಅನಿಸುತ್ತದೆ. ಅವರೇ ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಬಹುದು. ಆರ್‌ಸಿಬಿ ನಾಯಕ ಪಟ್ಟವನ್ನು ಮತ್ತೆ ವಿರಾಟ್ ಕೊಹ್ಲಿ ವಹಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ಎಬಿಡಿ ನೀಡಿರುವ ಹೇಳಿಕೆ ಪುಷ್ಠಿ ನೀಡಿದಂತಿದೆ.
143 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ, 66 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, 70 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಒಮ್ಮೆ ಆರ್‌ಸಿಬಿ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಈ ವೇಳೆ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಾಣಬೇಕಾಯಿತು.
ಆರ್‌ಸಿಬಿ ಮ್ಯಾನೇಜ್ಮೆಂಟ್ ಐಪಿಎಲ್ ಮೆಗಾ ಹರಾಜಿನಲ್ಲಿ ನಾಯಕನ ಹುಡುಕಾಟದಿಂದ ಹಿಂದೆ ಸರಿದಿದ್ದನ್ನು ನೋಡಿದಾಗಲೇ, ವಿರಾಟ್ ಕೊಹ್ಲಿ ಮುಂದಿನ ಬಾರಿ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಧೃಡ ಪಟ್ಟಂತೆ ಕಾಣುತ್ತಿತ್ತು. ಈ ಅಭಿಮಾನಿಗಳು ಸಹ ತಮಗೆ ತೋಚಿದ ರೀತಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಎಬಿಡಿ ನೀಡಿರುವ ಹೇಳಿಕೆ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಲಿದೆ. ಮಾಯಾಜಿಂಕೆಯಂತೆ 17 ವರ್ಷ ಕಾಡಿದ ಕಪ್‌ಗೆ ಈ ಬಾರಿಯಾದ್ರೂ ಆರ್‌ಸಿಬಿ ಮುತ್ತಿಡಲಿ ಎಂಬುದೇ ಅಭಿಮಾನಿಗಳ ಆಶಯ.