ಐಪಿಎಲ್ 2021ಕ್ಕೆ ಆರ್‌ಸಿಬಿ ಪರ ಎಬಿ ಡಿ ವಿಲಿಯರ್ಸ್ ಅಭ್ಯಾಸ ಆರಂಭ

ಅಬುಧಾಬಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಮಿಸ್ಟರ್ 360 ಡಗ್ರೀ ಖ್ಯಾತಿಯ ಡಿ ವಿಲಿಯರ್ಸ್ ಸೋಮವಾರ (ಸೆಪ್ಟೆಂಬರ್ 13) ನೆಟ್ ಅಭ್ಯಾಸ ಆರಂಭಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್ ನಡೆಯಲಿದೆ.
ಯುಎಇಗೆ ಒಂದು ವಾರದ ಹಿಂದೆ ಬಂದಿದ್ದ ಎಬಿ ಡಿ ವಿಲಿಯರ್ಸ್ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಿದ್ದಾರೆ. ಆ ಬಳಿಕ ಮೊದಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ, ಬೋಲ್ಡ್ ಡೈರಿ ಹೆಸರಿನಲ್ಲಿ ವಿಡಿಯೋ ಹಾಕಿಕೊಂಡಿದೆ. ಈ ವಿಡಿಯೋದಲ್ಲಿ ಎಬಿಡಿ ಯುಎಇಗೆ ಬರುವಲ್ಲಿಂದ ಹಿಡಿದು ಮೊದಲ ಅಭ್ಯಾಸದ ವೇಳೆಯ ಚಿತ್ರಣಗಳಿವೆ.

ಆರ್‌ಸಿಬಿ ಪರ ಎಬಿಡಿ ಉತ್ತಮ ಪ್ರದರ್ಶನ
37ರ ಹರೆಯದ ಎಬಿ ಡಿ ವಿಲಿಯರ್ಸ್ ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 6 ಇನ್ನಿಂಗ್ಸ್‌ಗಳನ್ನಾಡಿರುವ ಎಬಿಡಿ 51.75ರ ಸರಾಸರಿಯಲ್ಲಿ 207 ರನ್ ಗಳಿಸಿದ್ದಾರೆ. ಅತ್ಯಧಿಕ ವೈಯಕ್ತಿಕ ರನ್ ಪಟ್ಟಿಯಲ್ಲಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಧವನ್ 8 ಇನ್ನಿಂಗ್ಸ್‌ಗಳಲ್ಲಿ 54.29ರ ಸರಾಸರಿಯಲ್ಲಿ 380 ರನ್ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ನ ನಾಯಕ ಕೆಎಲ್ ರಾಹುಲ್ 7 ಇನ್ನಿಂಗ್ಸ್‌ಗಳಲ್ಲಿ 66.20ರ ಸರಾಸರಿಯಲ್ಲಿ 331 ರನ್ ಬಾರಿಸಿದ್ದಾರೆ. ಆರ್‌ಸಿಬಿ ತಂಡ ಸದ್ಯದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2 ಪಂದ್ಯ ಸೋತು 10 ಅಂಕ ಕಲೆ ಹಾಕಿದೆ. ದ್ವಿತೀಯ ಹಂತದ ಐಪಿಎಲ್ ವೇಳೆ ಆರ್‌ಸಿಬಿ ತಂಡದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆಸ್ಟ್ರೇಲಿಯಾದ ಒಂದಿಷ್ಟು ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ.
ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಗೆ ಕೆಕೆಆರ್ ಎದುರಾಳಿ
ಈ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಒಂದು ಬಾರಿಯೂ ಕಪ್ ಗೆಲ್ಲದ ತಂಡವೆಂಬ ಹಣೆಪಟ್ಟಿಯನ್ನು ಬಿಚ್ಚಿ ಕೆಳಗಿಡಲು ಆರ್‌ಸಿಬಿಗೆ ಒಳ್ಳೆಯ ಅವಕಾಶವಿದೆ. ಆದರೆ ಇನ್ನುಳಿದ ಪಂದ್ಯಗಳಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಬೇಕಷ್ಟೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ಹೊಸ ಬಲಿಷ್ಠ ಆಟಗಾರರು ಸೇರ್ಪಡೆಯಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ನಿರೀಕ್ಷೆಯಿದೆ. 2016, 2011, 2009ರಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ ಒಮ್ಮೆಯೂ ಟ್ರೋಫಿ ಜಯಿಸಿಲ್ಲ. ಐಪಿಎಲ್ ದ್ವಿತೀಯ ಹಂತದಲ್ಲಿ ಸೆಪ್ಟೆಂಬರ್ 20ರಂದು ಆರ್‌ಸಿಬಿ ಮೊದಲ ಪಂದ್ಯವನ್ನಾಡಲಿದೆ. ಆರಂಭಿಕ ಪಂದ್ಯವಾಗಿ ಆರ್‌ಸಿಬಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. 7.30 pmಗೆ ಈ ಪಂದ್ಯ ನಡೆಯಲಿದೆ.

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications