ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತದ ಸನಿಹಕ್ಕೆ ಬಂದಿದ್ದರೂ ಭಾರತ ತಂಡವನ್ನು ಗೆಲುವಿನ ದಡ ದಾಟಿಸಿದ್ದು ರಿಂಕು ಸಿಂಗ್. ಈ ಮೂಲಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಫಿನಿಷರ್ ಸ್ಥಾನವನ್ನು ತುಂಬಲು ಸಮರ್ಥ ಎನ್ನುವುದನ್ನು ಮತ್ತೊಮ್ಮೆ ಸಾರಿದ್ದಾರೆ.
ರಿಂಕು ಸಿಂಗ್ ಅವರ ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಭಾರೀ ಪ್ರಶಂಸೆ ವ್ಯಕ್ತೊಡಿಸಿದ್ದಾರೆ. ಪಂದ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿದ್ದಾರೆ ರಿಂಕು ಎಂದು ಕೊಂಡಾಡಿದ್ದಾರೆ ಅಭಿಷೇಕ್ ನಾಯರ್. 209 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ರಿಂಕು ಸಿಂಗ್ ಅಂತಿಮವಾಗಿ ಭಾರತದ ಗೆಲುವಿನಲ್ಲಿ ರಿಂಕು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.

ಅಭಿಷೇಕ್ ನಾಯರ್ ಎಡಗೈ ಆಟಗಾರ ರಿಂಕು ಸಿಂಗ್ ಅವರು ಭಾರತದ ಪರವಾಗಿ ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಸಾಕಷ್ಟು ಬಾರಿ ಈ ಪಾತ್ರ ನಿರ್ವಹಿಸಿದ್ದಾರೆ ಎಂದಿದ್ದಾರೆ. ಸುದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಆಟಗಾರನ ಪ್ರಬುದ್ಧತೆಯನ್ನು ಈ ಯುವ ಆಟಗಾರ ಪ್ರದರ್ಶಿಸಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
"ಇಂಥಾ ಪ್ರದರ್ಶನ ನೀಡಲು ಸಾಕಷ್ಟು ಸಾಮರ್ಥ್ಯ ಬೇಕು. ಈ ಪಾತ್ರವನ್ನು ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಮಾಡಿರುವ ಆಟಗಾರನ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಸಾಕಷ್ಟು ಒತ್ತಡಗಳು ಇದ್ದ ಸಂದರ್ಭದಲ್ಲಿ ಸಮಚಿತ್ತವಾಗಿದ್ದುಕೊಂಡು ಈ ಪ್ರದರ್ಶನ ನೀಡಲು ಅವರು ಸಮರ್ಥವಾಗಿದ್ದಾರೆ" ಎಂದಿದ್ದಾರೆ ಅಭಿಷೇಕ್ ನಾಯರ್.
"ಭಾರತಕ್ಕೆ ಮೂರನೇ ಬಾರಿಗೆ ಆತ ಈ ರೀತಿಯಾಗಿ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿದ್ದಾರೆ. ಆತನೇನು 5-7 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹೊಂದಿದ ಆಟಗಾರ ಅಲ್ಲ. ಆದರೆ ಆತನಲ್ಲಿ ಅಷ್ಟು ಸುದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹಾಗೂ ಪ್ರಬುದ್ಧತೆಯಿದೆ" ಎಂದಿದ್ದಾರೆ ಅಭಿಷೇಕ್ ನಾಯರ್.
ಇನ್ನು ಇದೇ ಸಂದರ್ಭದಲ್ಲಿ ನಾಯರ್ ಭಾರತಕ್ಕೆ ಧೋಣಿ ಹಾಗೂ ಹಾರ್ದಿಕ್ ಪಾಂಡ್ಯ ಬಳಿಕ ಮತ್ತೋರ್ವ ಫಿನಿಷರ್ ದೊರೆತಿದ್ದಾರೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. "ಈ ಪ್ರದರ್ಶನ ಆತನಲ್ಲಿ ಫಿನಿಷಿಂಗ್ ಕಲೆ ಕರಗತವಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಅದು ಸುಲಭವಲ್ಲ, ಹಾರ್ದಿಕ್ ಹಾಗೂ ಧೋನಿ ಅದನ್ನು ಮಾಡಿದವರು. ಆದರೆ ಅದಾದ ಬಳಿಕ ನಮ್ಮಲ್ಲಿ ಆ ಪಾತ್ರವನ್ನು ನಿರ್ವಹಿಸಲು ಯಾರೂ ಇಲ್ಲ. ಫಿನಿಷರ್ ಎಂದರೆ ಕೇವಲ ರನ್‌ಗಳನ್ನು ಗಳಿಸುವುದು ಮಾತ್ರವಲ್ಲ. ಅದನ್ನು ಗಳಿಸುವ ದಾರಿಯೂ ಮುಖ್ಯವಾಗುತ್ತದೆ. ರಿಂಕು ಬಹಳ ತಾಳ್ಮೆ ಹಾಗೂ ಸಮಚಿತ್ತದಿಂದ ರನ್‌ಗಳನ್ನು ಗಳಿಸಿ ತಂಡವನ್ನು ಗೆಲ್ಲಿಸಿದ್ದಾರೆ" ಎಂದಿದ್ದಾರೆ ಅಭಿಷೇಕ್ ನಾಯರ್.