ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟ ತಲುಪಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್‌ಗೆ ಪ್ರವೇಶ ಪಡೆದಿವೆ. ಇನ್ನು ಒಂದು ಸ್ಥಾನಕ್ಕಾಗಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಫೈಟ್ ನಡೆಯಲಿದೆ. ಈ ವೇಳೆ ಈ ಆವೃತ್ತಿಯ 61ನೇ ಪಂದ್ಯಕ್ಕೆ ಲಕ್ನೋ ಮೈದಾನ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಎಸ್‌ಆರ್‌ಎಚ್ ಬ್ಯಾಟರ್ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರ ಆಟಕ್ಕೆ ಲಕ್ನೋ ಸ್ಪಿನ್ ಬೌಲರ್ ದಿಗ್ವೇಶ್ ರಾಠಿ ಬ್ರೇಕ್ ಹಾಕಿದರು.
ಅಭಿಷೇಕ್ ಶರ್ಮಾ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಇವರು 20 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 59 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರ ಬಿರುಸಿನ ಆಟಕ್ಕೆ ದಿಗ್ವೇಶ್ ರಾಠಿ ಬ್ರೇಕ್ ಹಾಕಿದರು. ದಿಗ್ವೇಶ್ ರಾಠಿ ಎಂಟನೇ ಓವರ್ ಮೂರನೇ ಎಸೆತದಲ್ಲಿ ಅಭಿಷೇಕ್‌ಗೆ ಖೆಡ್ಡಾ ತೋಡಿದರು. ದಿಗ್ವೇಶ್ ಎಸೆದ ಗೂಗ್ಲಿಯನ್ನು ಎಕ್ಸ್‌ಟ್ರಾ ಕವರ ಮೇಲಿನಿಂದ ಸಿಕ್ಸರ್ ಬಾರಿಸಲು ಹೋದ ಅಭಿಷೇಕ್ ಶಾರ್ದೂಲ್ ಠಾಕೂರ್‌ಗೆ ಕ್ಯಾಚ್ ನೀಡಿದರು.

ದಿಗ್ವೇಶ್ ಇವರ ವಿಕೆಟ್ ಪಡೆಯುತ್ತಿದ್ದಂತೆ ತಮ್ಮ ನೋಟ್‌ಬುಕ್ ಸೆಲೆಬ್ರೇಷನ್ ಆರಂಭಿಸಿದರು. ಇದಾದ ಬಳಿಕ ಇವರು ಅಭಿಷೇಕ್‌ಗೆ ಏನೋ ಸಂಕೇತವನ್ನು ಸಹ ನೀಡಿದರು. ಆಗ ಕೋಪಗೊಂಡ ಅಭಿಷೇಕ್ ದಿಗ್ವೇಶ್ ಅವರೊಂದಿಗೆ ಮಾತಿನ ಚಕಮಕಿಗೆ ಇಳಿದರು. ಆಗ ಇಬ್ಬರ ನಡುವೆ ವಾಗ್ವಾದ ಸಹ ನಡೆಯಿತು. ನೋಡು ನೋಡುತ್ತಲೇ ಈ ವಾಗ್ವಾದ ದೀರ್ಘಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಅಂಪೈರ್ ಹಾಗೂ ರಿಷಭ್ ಪಂತ್ ಈ ಸನ್ನಿವೇಶವನ್ನು ತಿಳಿಗೊಳಿಸಲು ನೋಡಿದರು. ಇದಾದ ನಂತರ ಅಭಿಷೇಕ್ ಪೆವಿಲಿಯನ್‌ಗೆ ಮರಳಿದರು.
ಪಂದ್ಯದ ಬಳಿಕ ಎಸ್‌ಆರ್‌ಎಚ್ ತಂಡದ ಅಭಿಷೇಕ್ ಶರ್ಮಾ ಹಾಗೂ ದಿಗ್ವೇಶ್ ರಾಠಿ ಅವರೊಂದಿಗೆ ರಾಜೀವ್ ಶುಕ್ಲಾ ಮಾತನಾಡುತ್ತಿರುವುದು ಕಂಡು ಬಂದಿತು. ಈಗ ಈ ಫೋಟೋ ಹಾಗೂ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಪಂದ್ಯದ ಬಳಿಕ ಎಲ್‌ಎಸ್‌ಜಿ ಸಹಾಯಕ ಕೋಚ್ ವಿಜಯ್ ದಹಿಯಾ, ಅಭಿಷೇಕ್ ಶರ್ಮಾ ಅವರೊಂದಿಗೆ ಮಾತನಾಡಿದರು. ಬಳಿಕ ರಾಠಿ ಹಾಗೂ ಅಭಿಷೇಕ್ ಕೈ ಕುಲುಕಿದರು.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ಮಿಚೆಲ್ ಮಾರ್ಷ್ ಹಾಗೂ ಐಡೇನ್ ಮಾರ್ಕ್ರಾಮ್ ಅವರ ಭರ್ಜರಿ ಆಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್‌ರೈಸರ್ಸ್ 18.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿ ಜಯ ಸಾಧಿಸಿತು. ಈ ಮೂಲಕ ಎಸ್‌ಆರ್‌ಎಚ್, ಲಕ್ನೋ ಸೂಪರ್ ಜೈಂಟ್ಸ್‌ಗೂ ಪ್ಲೇ ಆಫ್‌ಗೆ ಪ್ರವೇಶಿಸುವುದನ್ನು ತಡೆಯಿತು.
ಈ ವಾಗ್ವಾದದ ಬಗ್ಗೆ ದಿಗ್ವೇಶ್ ರಾಠಿ ಅವರ ವಿರುದ್ಧ ಬಿಸಿಸಿಐ ಶಿಸ್ತು ಕ್ರಮವನ್ನು ಕೈಗೊಂಡಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದಿಗ್ವೇಶ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಿದೆ. ಇದಲ್ಲದೆ, ಒಂದು ಪಂದ್ಯದ ನಿಷೇಧವನ್ನೂ ಹೇರಿದೆ. ಲೀಗ್‌ನಲ್ಲಿ ಮಾಡಿದ ತಪ್ಪನ್ನು ಪದೇ ಪದೇ ಮಾಡಿದಕ್ಕಾಗಿ ದಿಗ್ವೇಶ್ ವಿರುದ್ಧ ಬಿಸಿಸಿಐ ಶಿಸ್ತು ಕ್ರಮವನ್ನು ಕೈಗೊಂಡಿದೆ.