ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿರುವ ಅಭಿಷೇಕ್ ಶರ್ಮಾ, ಸನ್‌ರೈಸರ್ಸ್ ಗೆಲುವಿನಲ್ಲಿ ಮಿಂಚಿದರು. ದಾಖಲೆಯ ಮೊತ್ತವನ್ನು ಹೈದರಾಬಾದ್ ಸಲೀಸಾಗಿ ಚೇಸ್ ಮಾಡಿ ಗೆಲ್ಲುವಲ್ಲಿ ಅಭಿಷೇಕ್ ಶರ್ಮಾ ಅವರ ಪಾತ್ರ ಬಹಳ ಮುಖ್ಯ ಈ ಧಮಾಕೆದಾರ್ ಇನಿಂಗ್ಸ್ ಮೂಲಕ ಅಭಿಷೇಕ್ ಶರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ಬರೆದರು. ಹಾಗಿದ್ದರೆ ಅವರು ಬರೆದ ದಾಖಲೆಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಬಾರಿಸಿದ 82 ರನ್‌ಗಳ ಸಹಾಯದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 245 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಕಲೆ ಹಾಕಿ ಅಬ್ಬರಿಸಿತು. ಈ ಇನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಆಟ ಎಲ್ಲರ ಗಮನ ಸೆಳೆಯಿತು.

ಪಂಜಾಬ್ ವಿರುದ್ಧ ಪಂದ್ಯದಲ್ಲಿ ಅಭಿಷೇಕ್ 55 ಎಸೆತಗಳಲ್ಲಿ 141 ರನ್ ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ 14 ಬೌಂಡರಿ, 10 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ಅಭಿಷೇಕ್ ಹೊಸ ದಾಖಲೆ ಬರೆದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ 40 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಶತಕವನ್ನು ಮೂರು ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.
ದೇಶೀಯ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ಇದೇ ವರ್ಷ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು. ಈಗ ಪಂಜಾಬ್ ವಿರುದ್ದ 40 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ 40 ಕ್ಕೂ ಕಡಿಮೆ ಎಸೆತದಲ್ಲಿ ಮೂರು ಬಾರಿ ಶತಕ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಶ್ರೀಲಂಕಾದ ದಾಸುನ್ ಶನಕ ಮತ್ತು ಭಾರತದ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್‌ನಲ್ಲಿ 40 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ತಲಾ ಎರಡು ಶತಕಗಳನ್ನು ಗಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ಅಭಿಷೇಕ್ ಇದು ತುಂಬಾ ವಿಶೇಷವಾದ ದಿನ. ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ಇನ್ನು ಯುವರಾಜ್ ಸಿಂಗ್ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಇನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು. ಸೂರ್ಯ, ಅಭಿಷೇಕ್ ಅವರಿಗೆ ಕೆಲವು ಸಲಹೆ ನೀಡಿದ್ದಾಗಿ ತಿಳಿಸಿದರು.