ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಸ್ಟಾರ್ ಆಟಗಾರರು ಹಾಗೂ ಯುವ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ. ಪ್ರಸಕ್ತ ಐಪಿಎಲ್‌ನ ಆರನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸನ್ ತಂಡ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿತು. ಈ ವೇಳೆ ಹೈದರಾಬದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಅರ್ಧಶತಕದತ್ತ ಸಾಗುತ್ತಿದ್ದಾಗ ಬ್ಲೆಸಿಂಗ್ ಮುಜರಬಾನಿ ಅವರ ಎಸೆತದಲ್ಲಿ ವರುಣ್ ಚಕ್ರವರ್ತಿ ಅವರು ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಈ ಕ್ಯಾಚ್ ಬಗ್ಗೆ ಸದ್ಯ ವಿವಾದ ಹುಟ್ಟಿಕೊಂಡಿದೆ. ಈ ಕ್ಯಾಚ್ ಬಳಿಕ ಅಭಿಷೇಕ್ ಶರ್ಮಾ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಈಗ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಅಭಿಷೇಕ್ ಶರ್ಮಾ ಔಟಾದ ನಂತರ ಹೊರಡುವಾಗ, ಅಭಿಷೇಕ್ ನಿಯಮಗಳ ಪ್ರಕಾರ ಕಾನೂನುಬಾಹಿರವೆಂದು ಹೇಳುವ ಕೆಲಸವನ್ನು ಮಾಡಿದ್ದಾರೆ. ಆದರೆ ಆ ತಪ್ಪು ಏನು ಎಂಬುದನ್ನು ಐಪಿಎಲ್ ಕೌನ್ಸಿಲ್ ತಿಳಿಸಿಲ್ಲ. ಇವರು ಆರ್ಟಿಕಲ್ 2.3 ರ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಇದು ಪಂದ್ಯದ ಸಮಯದಲ್ಲಿ ಅಶ್ಲೀಲ ಭಾಷೆಯನ್ನು ಬಳಸುವುದಕ್ಕೆ ಸಂಬಂಧಿಸಿದೆ. ಹೀಗಾಗಿ ಇವರ ಮೇಲೆ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದ್ದು, ಡಿಮೆರಿಟ್ ಪಾಯಿಂಟ್ ಕೂಡ ಪಡೆದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿದರು. ಈ ಮೂಲಕ ಅಭಿಷೇಕ್ ಶರ್ಮಾ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ, ಅವರು ಒಟ್ಟು 143 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಭಿಷೇಕ್ ಶರ್ಮಾ ಈಗ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಎರಡನೇ ಆಟಗಾರರಾಗಿದ್ದಾರೆ.

ಡೇವಿಡ್ ವಾರ್ನರ್, 143 ಸಿಕ್ಸರ್‌ಗಳು
ಅಭಿಷೇಕ್ ಶರ್ಮಾ, 101 ಸಿಕ್ಸರ್‌ಗಳು
ಹೆನ್ರಿಕ್ ಕ್ಲಾಸೆನ್, 90 ಸಿಕ್ಸರ್‌ಗಳು
ಕೇನ್ ವಿಲಿಯಮ್ಸನ್, 64 ಸಿಕ್ಸರ್‌ಗಳು
ಟ್ರಾವಿಸ್ ಹೆಡ್, 50 ಸಿಕ್ಸರ್‌ಗಳು
ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಛಾಪು ಮೂಡಿಸಿದ ಆಟಗಾರ ಅಭಿಷೇಕ್ ಶರ್ಮಾ. ಇವರು 2019ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ಅಭಿಷೇಕ್ ಶರ್ಮಾ ಇದುವರೆಗೆ ಐಪಿಎಲ್‌ನಲ್ಲಿ 79 ಪಂದ್ಯಗಳನ್ನು ಆಡಿದ್ದಾರೆ, 27.11 ರ ಸರಾಸರಿಯಲ್ಲಿ ಒಟ್ಟು 1871 ರನ್ ಗಳಿಸಿದ್ದಾರೆ.