ICC T20I Ranking: ಅಭಿಷೇಕ್ ಶರ್ಮಾ 38 ಸ್ಥಾನ ಜಿಗಿತ: ವರುಣ್‌ಗೆ 3ನೇ ಸ್ಥಾನ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಅಭಿಷೇಕ್ ಶರ್ಮಾ, ಐಸಿಸಿ ಶ್ರೇಯಾಂಕದಲ್ಲೂ ಭಾರೀ ಜಿಗಿತ ಕಂಡಿದ್ದಾರೆ. ಬುಧವಾರ ಬಿಡುಗಡೆಯಾದ ನೂತನ ಐಸಿಸಿ ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿರುವ ಅಭಿಷೇಕ್, ಶ್ರೇಯಾಂಕದಲ್ಲೂ ಅಬ್ಬರಿಸಿದ್ದಾರೆ. ಈ ಮೂಲಕ ಭಾರತದ ಉತ್ತಮ ಶ್ರೇಯಾಂಕ ಹೊಂದಿರುವ ಬ್ಯಾಟರ್ ಎಂಬ ಹೆಗ್ಗಳಿಕೆ ಅಭಿಷೇಕ್ ಅವರದ್ದಾಗಿದೆ.
ಭಾರತ ಪ್ರವಾಸ ಬೆಳೆಸಿದ್ದ ಇಂಗ್ಲೆಂಡ್ ತಂಡ, ಈ ವೇಳೆ ಐದು ಪಂದ್ಯಗಳ ಟಿ20 ಸರಣಿ ಆಡಿತು. ಈ ಸರಣಿಯಲ್ಲಿ ಅಭಿಷೇಕ್ ಶರ್ಮಾ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಡಿದ ಐದು ಪಂದ್ಯಗಳಲ್ಲಿ ಅಭಿಷೇಕ್ 1 ಶತಕ ಹಾಗೂ 1 ಅರ್ಧಶತಕದ ಬಲದಿಂದ 279 ರನ್ ಸಿಡಿಸಿದರು. ಇವರ ಮನಮೋಹಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಈಗ ಇವರು ಐಸಿಸಿ ಶ್ರೇಯಾಂಕದಲ್ಲಿ ಭಾರೀ ಬಡ್ತಿ ಪಡೆದಿದ್ದಾರೆ. ಸದ್ಯ ಐಸಿಸಿ ಶ್ರೇಯಾಂಕದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಟಿ20 ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದ್ದಾರೆ.

38 ಸ್ಥಾನ ಜಿಗಿತ
ಅಭಿಷೇಕ್ ಶರ್ಮಾ ಐಸಿಸಿ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡಿದ್ದಾರೆ. 38 ಸ್ಥಾನ ಏರಿಕೆ ಕಂಡಿರುವ ಅಭಿಷೇಕ್, ಎರಡನೇ ಸ್ಥಾನ ತಲುಪಿದ್ದಾರೆ. ಸದ್ಯ ಇವರ ಬುಟ್ಟಿಯಲ್ಲಿ 829 ಅಂಕ ರೇಟಿಂಗ್ ಪಾಯಿಂಟ್‌ಗಳು ಇವೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮುಂದುವರೆದಿದ್ದಾರೆ. ಇವರು 855 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಇನ್ನು ಕಳೆದ ವಾರ ಎರಡನೇ ಶ್ರೇಯಾಂಕದಲ್ಲಿದ್ದ ತಿಲಕ್ ವರ್ಮಾ ಒಂದು ಸ್ಥಾನ ಕುಸಿತ ಕಂಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಸೂರ್ಯಗೆ ನಿರಾಸೆ
ಸೂರ್ಯಕುಮಾರ್ ಯಾದವ್ ಪ್ರಸಕ್ತ ಟಿ20 ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 5ರ ಸರಾಸರಿಯಲ್ಲಿ 28 ರನ್ ಕಲೆ ಹಾಕಿದ್ದು, ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದು, ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡದ ಯಶಸ್ವಿ ಜೈಸ್ವಾಲ್ 3 ಸ್ಥಾನ ಹಿನ್ನಡೆ ಅನುಭವಿಸಿದ್ದು, ಸದ್ಯ 12 ನೇ ಸ್ಥಾನದಲ್ಲಿದ್ದಾರೆ.

ವರುಣ್‌ಗೆ ಮೂರನೇ ಸ್ಥಾನ
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ವರುಣ್ ಚಕ್ರವರ್ತಿ 705 ಅಂಕಗಳೊಂದಿಗೆ ಮೂರನೇ ಸ್ಥಾನ ತಲುಪಿದ್ದಾರೆ. ವರುಣ್ ಇಂಗ್ಲೆಂಡ್ ವಿರುದ್ಧ 14 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದೇ ಸರಣಿಯಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿರುವ ರವಿ ಬಿಷ್ಣೋಯಿ ನಾಲ್ಕು ಸ್ಥಾನ ಏರಿಕೆ ಕಂಡಿದ್ದು ಆರನೇ ಸ್ಥಾನ ತಲುಪಿದ್ದಾರೆ. ಅರ್ಷದೀಪ್ ಸಿಂಗ್ 9, ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ.
ಹಾರ್ದಿಕ್ ನಂಬರ್ 1
ಇನ್ನು ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ನಂಬರ್ 1 ಸ್ಥಾನದಲ್ಲಿ ಮುಂದೆವರಿದಿದ್ದಾರೆ. ಅಕ್ಷರ್ ಒಂದು ಶ್ರೇಯಾಂಕ ಏರಿಕೆ ಕಂಡಿದ್ದು 11ನೇ ಸ್ಥಾನ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications