ನಾಗ್ಪುರ: ಭರವಸೆಯ ಆಟಗಾರ ಅಭಿಷೇಕ್ ಶರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 228 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 10 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಹಲವು ತಿಂಗಳು ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿಸಿದ ಇಶಾನ್ ಕಿಶನ್ (8) ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಟೀಮ್ ಇಂಡಿಯಾ 2.5 ಓವರ್‌ಗಳಲ್ಲಿ 27 ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಗಲು ಬ್ಯಾಟ್ ಹಿಡಿದು ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬಂದರು. ಆರಂಭಿಕ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಮುಂದುವರೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಜೋಡಿ ಅಬ್ಬರಿಸಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಕಿವೀಸ್ ಬೌಲರ್‌ಗಳ ಮುಖದಲ್ಲಿ ಚಿಂತೆಯ ಗೆರೆ ಮೂಡಿಸಿತು. ಆರಂಭದಲ್ಲಿ ಹಾಕಿಕೊಂಡ ಗೇಮ್ ಪ್ಲ್ಯಾನ್ ನಂತೆ ಬ್ಯಾಟ್ ಮಾಡಿದ ಅಭಿಷೇಕ್, ಸೂರ್ಯ ಅಬ್ಬರಿಸಿದರು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಚಿತ್ತ ನೆಡುವಂತೆ ಮಾಡಿತು.
ಮೂರನೇ ವಿಕೆಟ್‌ಗೆ ಸೂರ್ಯ ಹಾಗೂ ಅಭಿಷೇಕ್ ಜೋಡಿ 47 ಎಸೆತಗಳಲ್ಲಿ 99 ರನ್‌ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಸೂರ್ಯಕುಮಾರ್ 22 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕ್ಲಾಸ್ ಬ್ಯಾಟ್ ಮಾಡಿದರು. ಇವರು 35 ಎಸೆತಗಳಲ್ಲಿ 240ರ ಸ್ಟ್ರೈಕ್ ರೇಟ್‌ನಲ್ಲಿ 84 ರನ್ ಸಿಡಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 5 ಬೌಂಡರಿ, 8 ಸಿಕ್ಸರ್‌ಗಳು ಸೇರಿವೆ.
ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್ ಬಾರಿಸಿ ಔಟ್ ಆದರು. ಶಿವಂ ದುಬೆ 9, ಅಕ್ಷರ್ ಪಟೇಲ್ 5 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಅಬ್ಬರಿಸಿದರು. ಇವರು ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಇವರು 20 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 44 ರನ್ ಸಿಡಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 238 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ತಂಡದ ಜಾಕೋಬ್ ಡಫ್ಫಿ ಹಾಗೂ ಕೈಲ್ ಜೇಮಿಸನ್ ತಲಾ 2 ವಿಕೆಟ್ ಕಬಳಿಸಿದರು.