ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಭಿಷೇಕ್ ಶರ್ಮಾ, ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಅಲ್ಲದೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ತಾವು ಎದುರಿಸುವ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಆಡುವ ಅಭಿಷೇಕ್, ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಅಭಿಷೇಕ್ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದು, ಗುರುವಾರದ ಪಂದ್ಯದಲ್ಲೂ ಅಭಿಷೇಕ್ ಅಬ್ಬರಿಸಿದ್ದಾರೆ.
ಗುರುವಾರ ನಾಗ್ಪುರದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 237 ರನ್ ಸೇರಿಸಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ನ್ಯೂಜಿಲೆಂಡ್ 48 ರನ್ ಸೋಲು ಕಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬಿರುಸಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು.

ಅಭಿಷೇಕ್ ಶರ್ಮಾ ನಾಗ್ಪುರದಲ್ಲಿ ತಮ್ಮ ನೈಜ ಆಟವನ್ನು ಆಡಿ ಅಬ್ಬರಿಸಿದರು. ಇವರು ಕೇವಲ 35 ಎಸೆತಗಳಲ್ಲಿ 5 ಬೌಂಡರಿ, 8 ಮುಗಿಲೆತ್ತರದ ಸಿಕ್ಸರ್ ಸಹಾಯದಿಂದ 84 ರನ್ ಸಿಡಿಸಿದರು. ಈ ಮೂಲಕ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದರು.
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 8 ಸಿಕ್ಸರ್ ಬಾರಿಸಿದ ಅಭಿಷೇಕ್ ತಮ್ಮ ಗುರು ಯುವರಾಜ್ ಸಿಂಗ್ ಅವರ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಅಳಿಸಿ ಹಾಕಿದರು. ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಆಡಿದ 34 ಪಂದ್ಯಗಳಲ್ಲಿ 81 ಸಿಕ್ಸರ್ ಬಾರಿಸಿದ್ದಾರೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಆಡಿದ 58 ಪಂದ್ಯಗಳಲ್ಲಿ 74 ಸಿಕ್ಸರ್ ಸಿಡಿಸಿದ್ದರು.
ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ಇವರು ಆಡಿದ 159 ಟಿ20 ಪಂದ್ಯಗಳಲ್ಲಿ 205 ಸಿಕ್ಸರ್ ಬಾರಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಆಡಿದ 100 ಪಂದ್ಯಗಳಲ್ಲಿ 156 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಸಹ ಟಿ20 ಕ್ರಿಕೆಟ್‌ನಲ್ಲಿ 124 ಸಿಕ್ಸರ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದು, ಇವರು 107 ಸಿಕ್ಸರ್ ಸಿಡಿಸಿದ್ದಾರೆ. ಟಾಪ್ 5 ಬ್ಯಾಟರ್‌ಗಳಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದು, ಇವರ ಬ್ಯಾಟ್‌ನಿಂದ 99 ಸಿಕ್ಸರ್ ಮೂಡಿ ಬಂದಿವೆ. ನಂತರದ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಇದ್ದಾರೆ.