IPL 2026: ಐಪಿಎಲ್ 2026ರ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ಓಪನಿಂಗ್ ಪಾರ್ಟ್ನರ್ ಟ್ರಾವಿಸ್ ಹೆಡ್ ಬಗ್ಗೆ ಅವರು ನೀಡಿರುವ ಹೇಳಿಕೆ ಆರ್‌ಸಿಬಿಗೆ ಸವಾಲು ಹಾಕಿದಂತಿದೆ. ಇಲ್ಲಿದೆ ನೋಡಿ ವೈರಲ್ ವಿಡಿಯೋ.
ಐಪಿಎಲ್ 2026ರ ಚೊಚ್ಚಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮಾರ್ಚ್ 28ರಂದು ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಲಿವೆ. ಇದಕ್ಕೂ ಮುನ್ನ ಟ್ರೆವಿಸ್ ಹೆಡ್ ಅವರ ಬ್ಯಾಟಿಂಗ್ ಫಾರ್ಮ್ ಮತ್ತು ರಣತಂತ್ರದ ಬಗ್ಗೆ ಅಭಿಷೇಕ್ ದೊಡ್ಡ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಬಾರಿ ಚಾಂಪಿಯನ್ ಆಗಿದ್ದ ಆರ್‌ಸಿಬಿ, ಈ ಬಾರಿಯೂ ಗೆಲುವಿನೊಂದಿಗೆ ಶುಭಾರಂಭ ಮಾಡಲು ಕಾತರವಾಗಿದೆ. ಆದರೆ ಹೈದರಾಬಾದ್‌ನ ಈ ಓಪನಿಂಗ್ ಜೋಡಿ ಚಿನ್ನಸ್ವಾಮಿಯ ಸಣ್ಣ ಬೌಂಡರಿಗಳಲ್ಲಿ ರನ್ ಮಳೆ ಹರಿಸುವ ಸೂಚನೆ ನೀಡಿದೆ.
ಐಪಿಎಲ್‌ನಲ್ಲಿ ನಿಮ್ಮ ನೆಚ್ಚಿನ ಎದುರಾಳಿ ತಂಡ ಯಾವುದು ಎಂದು ಅಭಿಷೇಕ್ ಶರ್ಮಾರನ್ನು ಕೇಳಿದಾಗ ಅವರು, "ವೈಯಕ್ತಿಕವಾಗಿ ನನಗೆ ಯಾವುದೇ ನಿರ್ದಿಷ್ಟ ನೆಚ್ಚಿನ ಎದುರಾಳಿ ತಂಡವಿಲ್ಲ. ಆದರೆ, ನನ್ನ ಓಪನಿಂಗ್ ಪಾರ್ಟ್ನರ್ ಟ್ರಾವಿಸ್ ಹೆಡ್‌ಗೆ ಆರ್‌ಸಿಬಿ ವಿರುದ್ಧ ಆಡುವುದೆಂದರೆ ತುಂಬಾ ಇಷ್ಟ. ಅವರು ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಾರೆ," ಎಂದು ಹೇಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್‌ಗಳ ಪಾಲಿಗೆ ಸ್ವರ್ಗವಾಗಿದ್ದು, ಟ್ರಾವಿಸ್ ಹೆಡ್ ಅವರಂತಹ ಸ್ಫೋಟಕ ಆಟಗಾರನಿಗೆ ಇದು ಮತ್ತಷ್ಟು ಅನುಕೂಲವಾಗಲಿದೆ. ಹೆಡ್ ಕಳೆದ ಸೀಸನ್‌ಗಳಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಇತಿಹಾಸ ಹೊಂದಿದ್ದಾರೆ. ಈಗ ಅಭಿಷೇಕ್ ಅವರ ಈ ಮಾತು ಆರ್‌ಸಿಬಿ ಅಭಿಮಾನಿಗಳಲ್ಲಿ ಮತ್ತು ಬೌಲರ್‌ಗಳಲ್ಲಿ ಸ್ವಲ್ಪ ಆತಂಕ ಮೂಡಿಸಿರುವುದು ನಿಜ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೆನ್ನೆಲುಬಾಗಿದ್ದರೂ, ಅವರ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದು ಮಾತ್ರ ಆರ್‌ಸಿಬಿ ತಂಡದ ಜೊತೆ ಎಂಬುದು ವಿಶೇಷ. 2016ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರನ್ನು ಸೇರಿಸಿಕೊಂಡಿತ್ತು.
ಅವರು 2018ರವರೆಗೆ ಆರ್‌ಸಿಬಿ ತಂಡದ ಭಾಗವಾಗಿದ್ದರು. ಆದರೆ, ಆ ಸಮಯದಲ್ಲಿ ಸ್ಟಾರ್ ಆಟಗಾರರಿಂದ ಕೂಡಿದ್ದ ಬೆಂಗಳೂರು ತಂಡದಲ್ಲಿ ಹೆಡ್ ಅವರಿಗೆ ಆಡುವ ಅವಕಾಶಗಳು ಬಹಳ ಕಡಿಮೆ ಸಿಕ್ಕಿದ್ದವು. ಆರ್‌ಸಿಬಿ ಬಿಟ್ಟ ನಂತರ ಕೆಲವು ಸೀಸನ್‌ಗಳ ಕಾಲ ಅವರು ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗದೆ 'ಅನ್-ಸೋಲ್ಡ್' ಆಗಿಯೇ ಉಳಿದಿದ್ದರು.
2024ರ ಐಪಿಎಲ್ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಇವರನ್ನು ಖರೀದಿಸಿತು. ಅಲ್ಲಿಂದ ಹೆಡ್ ಅವರ ಅದೃಷ್ಟವೇ ಬದಲಾಯಿತು. ಒಂದು ಕಾಲದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಹೆಡ್, ಇಂದು ಐಪಿಎಲ್ ಇತಿಹಾಸದ ಅತ್ಯಂತ ಅಪಾಯಕಾರಿ ಓಪನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ಹಣ ಮಾತ್ರವಲ್ಲದೆ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಪಾರ ಹೆಸರನ್ನು ಗಳಿಸಿರುವ ಅವರು, ಹೈದರಾಬಾದ್ ತಂಡಕ್ಕೆ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಟ್ರಾವಿಸ್ ಹೆಡ್ ಅವರ ದಾಖಲೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಕಳೆದ ಸೀಸನ್‌ನಲ್ಲಿ ಅವರು ಬೆಂಗಳೂರು ತಂಡದ ವಿರುದ್ಧ ತೋರಿದ ಅಬ್ಬರದ ಬ್ಯಾಟಿಂಗ್ ಇಂದಿಗೂ ಅಭಿಮಾನಿಗಳ ಕಣ್ಣಮುಂದೆ ಇದೆ. 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹೆಡ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೆಡ್ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 222.22 ರಷ್ಟಿದೆ. ಅಂದರೆ, ಅವರು ಕ್ರೀಸ್‌ಗೆ ಬಂದ ಕೂಡಲೇ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಐಪಿಎಲ್ 2026ರಲ್ಲಿ ಮತ್ತೊಮ್ಮೆ ಅಭಿಷೇಕ್ ಶರ್ಮಾ ಮತ್ತು ಹೆಡ್ ಜೋಡಿ ಸನ್ ರೈಸರ್ಸ್ ಹೈದರಾಬಾದ್ ಪರ ಇನ್ನಿಂಗ್ಸ್ ಆರಂಭಿಸಲಿದೆ. ಈ ಜೋಡಿಯ ಸ್ಫೋಟಕ ಬ್ಯಾಟಿಂಗ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಎಚ್‌ಆರ್‌ಎಚ್ ತಂಡ: ಎಶಾನ್ ಮಾಲಿಂಗ, ಟ್ರಾವಿಸ್ ಹೆಡ್, ಜೀಶನ್ ಅನ್ಸಾರಿ, ಅಭಿಷೇಕ್ ಶರ್ಮಾ, ಶಿವಂಗ್ ಕುಮಾರ್, ಅನಿಕೇತ್ ವರ್ಮಾ, ಸಲಿಲ್ ಅರೋರಾ, ಆರ್ ಸ್ಮರಣ್, ಸಾಕಿಬ್ ಹುಸೇನ್, ಇಶಾನ್ ಕಿಶನ್, ಓಂಕಾರ ತರ್ಮಲೆ, ಹೆನ್ರಿಕ್ ಕ್ಲಾಸೆನ್, ಅಮಿತ್ ಕುಮಾರ್, ನಿತೀಶ್ ಕುಮಾರ್ ರೆಡ್ಡಿ, ಪ್ರಫುಲ್ ಹಿಂಗೆ, ಹರ್ಷ್ ದುಬೆ, ಕ್ರೇನ್ಸ್ ಫುಲೆಟ್ರಾ, ಕಾಮಿಂದು ಮೆಂಡಿಸ್, ಲಿಯಾಮ್ ಲಿವಿಂಗ್‌ಸ್ಟೋನ್, ಹರ್ಷಲ್ ಪಟೇಲ್, ಶಿವಂ ಮಾವಿ, ಬ್ರೈಡನ್ ಕಾರ್ಸೆ, ಜ್ಯಾಕ್ ಎಡ್ವರ್ಡ್ಸ್, ಜಯದೇವ್ ಉನಾದ್ಕತ್.