ಲಕ್ನೋನ ಏಕಾನ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಆರ್ಭಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮಬಲದ ಪ್ರದರ್ಶನ ನೀಡಿದ ಕ್ಯಾಪಿಟಲ್ಸ್ ಎರಡು ಅಂಕಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಡೆಲ್ಲಿ ತಂಡಕ್ಕೆ ಬೌಲಿಂಗ್‌ನಲ್ಲಿ ಮುಕೇಶ್ ಕುಮಾರ್ ನೆರವಾದರೆ, ಬ್ಯಾಟಿಂಗ್‌ನಲ್ಲಿ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಅಭಿಷೇಕ್ ಪೋರೆಲ್ (Abishek Porel) ಆಧಾರವಾದರು. ಈ ಪಂದ್ಯದಲ್ಲಿ ಅಭಿಷೇಕ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಐಡೇನ್ ಮಾರ್ಕ್ರಾಮ್ (52 ರನ್) ಅರ್ಧಶತಕ ಹಾಗೂ ಮಿಚೆಲ್ ಮಾರ್ಷ್ (45 ರನ್), ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಯುಷ್ ಬದೋನಿ (36 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 161 ರನ್ ಸಿಡಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ 22 ವರ್ಷದ ಅನ್‌ಕ್ಯಾಪ್ಡ್ ಪ್ಲೇಯರ್ ಅಭಿಷೇಕ್ ಪೋರೆಲ್ ಕಮಾಲ್ ಪ್ರದರ್ಶನ ನೀಡಿದರು. ಕಳೆದ ಆವೃತ್ತಿಯಲ್ಲಿ ಇವರು ನೀಡಿದ್ದ ಪ್ರದರ್ಶನವನ್ನು ಕಂಡು ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಅಲ್ಲದೆ ಇವರಿಗೆ 4 ಕೋಟಿ ನೀಡಿತ್ತು. ಈ ಪ್ಲೇಯರ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಎಡಗೈ ಆಟಗಾರ ಎಲ್‌ಎಸ್‌ಜಿ ತಂಡದ ಅನುಭವಿ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತು ರನ್ ಮಹಲ್ ಕಟ್ಟಿದರು.
ಅಭಿಷೇಕ್ ಪೋರೆಲ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದರು. ಅಲ್ಲದೆ ಎರಡನೇ ವಿಕೆಟ್‌ಗೆ ಅನುಭವಿ ಕೆಎಲ್ ರಾಹುಲ್ (KL Rahul) ಅವರೊಂದಿಗೆ 49 ಎಸೆತಗಳಲ್ಲಿ 69 ರನ್ ಸಿಡಿಸಿ ಮಿಂಚಿದರು. ಡೆಲ್ಲಿ ತಂಡದ ಈ ಯುವ ಪ್ಲೇಯರ್ ಸರಣಿಯುದಕ್ಕೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ಧಾರೆ. ಇವರು ಆಡಿರುವ 8 ಪಂದ್ಯಗಳಲ್ಲಿ 161 ಸ್ಟ್ರೈಕ್ ರೇಟ್‌ನಲ್ಲಿ 174 ರನ್ ಸಿಡಿಸಿದ್ದಾರೆ. ಈ ವೇಳೆ ಇವರು 23 ಬೌಂಡರಿ, 7 ಸಿಕ್ಸರ್ ಸಹ ಸಿಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪೋರೆಲ್ ನೀಡಿರುವ ಸ್ಥಿರ ಬ್ಯಾಟಿಂಗ್ ಪ್ರದರ್ಶನಕ್ಕೆ ಇವರನ್ನು ಡೆಲ್ಲಿ ಮ್ಯಾನೇಜ್ಮೆಂಟ್ ಹರಾಜಿನ ಅಂಗಳಕ್ಕೆ ಬಿಟ್ಟಿರಲಿಲ್ಲ. ಐಪಿಎಲ್ 2024ರಲ್ಲಿ ಪೋರೆಲ್ ಆಡಿದ 14 ಪಂದ್ಯಗಳಲ್ಲಿ 32ರ ಸರಾಸರಿಯಲ್ಲಿ 327 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಅರ್ಧಶತಕಗಳು ಸಹ ಸೇರಿವೆ. 65 ರನ್ ಇವರ ಗರಿಷ್ಠ ರನ್ ಆಗಿದೆ. ಇದೇ ವೇಳೆ ಇವರು 36 ಬೌಂಡರಿ, 13 ಸಿಕ್ಸರ್ ಸಹ ಸಿಡಿಸಿದ್ದಾರೆ.