ಪಂದ್ಯಾವಳಿಯುದ್ದಕ್ಕೂ ಶ್ರಮಿಸಿದ ಶ್ರೀಲಂಕಾ ಮೈದಾನ ಸಿಬ್ಬಂದಿಗೆ ಭಾರೀ ಮೊತ್ತದ ಬಹುಮಾನ ಘೋಷಿಸಿದ ಎಸಿಸಿ
ಶ್ರೀಲಂಕಾದಲ್ಲಿ ಆಯೋಜಿಸಲಾಗಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯು ಕೆಲವು ರೋಮಾಂಚಕ ಕ್ರಿಕೆಟ್ ಹಣಾಹಣಿಗೆ ಸಾಕ್ಷಿಯಾಗಿದೆ ಮತ್ತು ಇದು ಅನಿರೀಕ್ಷಿತ ಹವಾಮಾನಕ್ಕೆ ತುತ್ತಾದ ಪಂದ್ಯಾವಳಿಯಾಗಿದೆ.
ಹೈಬ್ರಿಡ್ ಮಾದರಿಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೊದಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಿದ್ದರೆ, ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು.

ಹೈ-ವೋಲ್ಟೇಜ್ ಪಂದ್ಯಗಳು ಮತ್ತು ನಿರಂತರ ಮಳೆ ಅಡ್ಡಿಪಡಿಸುವಿಕೆ ನಡುವೆ, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನ ಗ್ರೌಂಡ್‌ಸ್ಟಾಫ್ ಮಾತ್ರ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಪ್ರತಿ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದಾಗಲೂ ಅವರು ತೋರಿದ ಪರಿಶ್ರಮವನ್ನು ಸ್ವತಃ ಭಾರತದ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
ಏಷ್ಯಾ ಕಪ್‌ನ ಬಹುತೇಕ ಪಂದ್ಯಗಳಿಗೆ ಮಳೆ ಮುನ್ಸೂಚನೆ ಇದ್ದ ಕಾರಣ, ಆರ್. ಪ್ರೇಮದಾಸ ಮೈದಾನ ಸಿಬ್ಬಂದಿಗಳು ಬೌಂಡರಿ ಲೈನ್ ಬಳಿ ಯಾವಾಗಲೂ ಸಿದ್ಧರಾಗಿ ನಿಲ್ಲುತ್ತಿದ್ದರು. ಮಳೆ ಬರುತ್ತಿದ್ದಂತೆಯೇ ಇಡೀ ಮೈದಾನವನ್ನು ಕವರ್ ಮಾಡುತ್ತಿದ್ದರು ಮತ್ತು ಮಳೆ ನಿಂತ ನಂತರ ಇಡೀ ಮೈದಾನದಿಂದ ನೀರು ಹೊರಹಾಕಲು ಮತ್ತು ಒಣಗಿಸಲು ಇನ್ನಿಲ್ಲದ ಕಸರತ್ತು ಮಾಡಿದರು.
ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್‌ನ ಫೈನಲ್ ಪಂದ್ಯಕ್ಕೂ ಮುನ್ನ ಮಳೆ ಮತ್ತು ಒದ್ದೆಯಾದ ಔಟ್‌ಫೀಲ್ಡ್‌ನಿಂದ 40 ನಿಮಿಷಗಳಷ್ಟು ತಡವಾಯಿತು. ಆದರೆ, ಮಳೆಯ ನಡುವೆಯೂ ಅಲ್ಲಿನ ಸಿಬ್ಬಂದಿಗಳು ಮೈದಾನವನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿದರು.
ಇದೀಗ ಪಂದ್ಯಾವಳಿಯುದ್ದಕ್ಕೂ ಮಳೆ ಕಾಟ ನೀಡಿದರೂ ಪಂದ್ಯಗಳು ಸುಗಮವಾಗಿ ಸಾಗಲು ಶ್ರಮಿಸಿದ ಶ್ರೀಲಂಕಾದ ಪೆಲ್ಲೆಕೆಲೆ ಮತ್ತು ಆರ್ ಪ್ರೇಮದಾಸ ಸ್ಟೇಡಿಯಂ ಮೈದಾನ ಸಿಬ್ಬಂದಿಗಳಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಭಾರೀ ಮೊತ್ತದ ಬಹುಮಾನ ನೀಡಿ ಗೌರವಿಸಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಗೌರವ ಕಾರ್ಯದರ್ಶಿಯೂ ಆಗಿರುವ ಜಯ್ ಶಾ ಅವರು ಮೈದಾನ ಸಿಬ್ಬಂದಿಯ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಎಕ್ಸ್ (ಟ್ವಿಟ್ಟರ್)ನಲ್ಲಿ ಜಯ್ ಶಾ, "ಕ್ರಿಕೆಟ್‌ನ ಅನ್‌ಸಂಗ್ ಹೀರೋಗಳಿಗೆ ದೊಡ್ಡ ಧ್ವನಿ! ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಡಳಿಯು ಕೊಲಂಬೊ ಮತ್ತು ಕ್ಯಾಂಡಿಯ ಕ್ಯುರೇಟರ್‌ಗಳು ಮತ್ತು ಮೈದಾನ ಸಿಬ್ಬಂದಿಗಳಿಗೆ 50,000 ಯುಎಸ್ ಡಾಲರ್ (41,54,517 ರೂಪಾಯಿ) ಉತ್ತಮ ಅರ್ಹ ಬಹುಮಾನವನ್ನು ಘೋಷಿಸಲು ಹೆಮ್ಮೆಪಡುತ್ತೇವೆ".
"ಮೈದಾನ ಸಿಬ್ಬಂದಿಗಳ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮವು 2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಮರೆಯಲಾಗದ ಚಮತ್ಕಾರವನ್ನಾಗಿ ಮಾಡಿದೆ. ಪಿಚ್ ಪರಿಪೂರ್ಣತೆಯಿಂದ ಅತ್ಯುತ್ತಮ ಔಟ್‌ಫೀಲ್ಡ್‌ಗಳವರೆಗೆ, ರೋಮಾಂಚಕ ಕ್ರಿಕೆಟ್ ಆಕ್ಷನ್‌ಗೆ ವೇದಿಕೆ ಸಿದ್ಧವಾಗಿದೆ," ಎಂದು ಜಯ್ ಶಾ ಬರೆದುಕೊಂಡಿದ್ದಾರೆ.
"ಮೈದಾನ ಸಿಬ್ಬಂದಿಗಳ ಪರಿಶ್ರಮ ಗುರುತಿಸುವಿಕೆಯು ಕ್ರಿಕೆಟ್‌ನ ಯಶಸ್ಸಿನಲ್ಲಿ ಈ ವ್ಯಕ್ತಿಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ. ಅವರ ಮಹಾನ್ ಸೇವೆಗಳನ್ನು ನಾವು ಆಚರಿಸೋಣ ಮತ್ತು ಗೌರವಿಸೋಣ," ಎಂದು ಜಯ್ ಶಾ ತಿಳಿಸಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿಯು ಭಾರೀ ಮಳೆಯಿಂದ ಪ್ರಭಾವಿತವಾದ ಹಲವಾರು ಪಂದ್ಯಗಳನ್ನು ಕಂಡಿದೆ. ಇದು ಪಂದ್ಯಗಳ ವಿಳಂಬಕ್ಕೆ ಕಾರಣವಾಯಿತು ಮತ್ತು ಪಂದ್ಯಗಳ ಮರುಹೊಂದಿಕೆಗೆ ಕಾರಣವಾಯಿತು.
ಸೆಪ್ಟೆಂಬರ್ 10ರಂದು ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯವಾಗಿತ್ತು. ನಿರಂತರ ಮಳೆ ಸುರಿದಿದ್ದರಿಂದಾಗಿ ಆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಆಗ ಮೈದಾನ ಸಿಬ್ಬಂದಿಗಳು ಹಗಲು-ರಾತ್ರಿಯನ್ನದೆ ಮೈದಾನವನ್ನು ಸಿದ್ಧಪಡಿಸಿದರು.
ಈ ಸವಾಲುಗಳ ನಡುವೆ, ಮೈದಾನದ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡಿದರು. ತಮ್ಮ ದಿನವನ್ನು ಬೆಳಿಗ್ಗೆ 4 ಗಂಟೆಯಿಂದಲೇ ಪ್ರಾರಂಭಿಸಿದರು. ಪಂದ್ಯವು ಕನಿಷ್ಠ ವಿಳಂಬದೊಂದಿಗೆ ಮುಂದುವರಿಯಲು ಶ್ರಮಪಟ್ಟಿದ್ದು, ಕ್ರಿಕೆಟ್ ಪ್ರೇಮಿಗಳ ಮನಗೆದ್ದಿತ್ತು.
ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ತಂಡಗಳನ್ನು ಒಳಗೊಂಡಿದ್ದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದಲ್ಲಿ ಮೈದಾನದ ಸಿಬ್ಬಂದಿಯ ಪರಿಶ್ರಮ ವಿಶೇಷವಾಗಿ ಗಮನ ಸೆಳೆದಿತ್ತು.
ಮೈದಾನದಿಂದ ನೀರನ್ನು ತ್ವರಿತವಾಗಿ ಹೊರಹಾಕುವುದಕ್ಕೆ ಪರಿಣಾಮಕಾರಿ ವಿಧಾನವನ್ನು ರೂಪಿಸಿದರು. ನಿಧಾನವಾಗಿ ಚಲಿಸುವ ಮತ್ತು ಸ್ವಲ್ಪ ನೀರನ್ನು ಹೀರಿಕೊಳ್ಳುವ ಸೂಪರ್ ಸಾಪ್ಪರ್‌ಗಳಂತಹ ತಂತ್ರಜ್ಞಾನವನ್ನು ಅವಲಂಬಿಸುವ ಬದಲು, ಅವರು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿದರು.
ಇಡೀ ಮೈದಾನವನ್ನು ಕವರ್ ಮಾಡಲಾಗಿತ್ತು ಮತ್ತು ನಂತರ ಕವರ್‌ಗಳ ಮೇಲೆ ಆವೃತವಾಗಿದ್ದ ನೀರನ್ನು ಬೌಂಡರಿ ಲೈನ್ ಹೊರಗೆ ಇರುವ ಚರಂಡಿಗಳಿಗೆ ಸ್ಥಳಾಂತರಿಸಲಾಯಿತು. ಆಟದ ಪ್ರದೇಶವು ನೀರು ಮುಕ್ತ ಹಾಗೂ ಒಣಗುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತಿತ್ತು.
ಆರ್ ಪ್ರೇಮದಾಸ ಕ್ರೀಡಾಂಗಣದ ಮುಖ್ಯ ಕ್ಯುರೇಟರ್ ಗಾಡ್‌ಫ್ರೇ ದಾಬಾರೆ, ಈ ಮಾನವ ಬಳಕೆ ವಿಧಾನವು ಸಮಯವನ್ನು ಉಳಿಸುತ್ತದೆ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಗಮನಿಸಿದರೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವಿವರಿಸಿದರು.
ಮೈದಾನದ ಸಿಬ್ಬಂದಿಯ ಪೂರ್ವಭಾವಿ ವಿಧಾನವನ್ನು ಗಾಡ್‌ಫ್ರೇ ದಾಬಾರೆ ಎತ್ತಿ ತೋರಿಸಿದರು. ಮಳೆಯು ಸನ್ನಿಹಿತವಾಗಿದೆ ಎಂದು ಅವರು ಗ್ರಹಿಸಿದ ತಕ್ಷಣ ಅವರು ಬೇಗನೆ ಮೈದಾನವನ್ನು ಕವರ್ ಮಾಡುತ್ತಿದ್ದರು, ಉಳಿದ ಕ್ಷೇತ್ರವನ್ನು ಆವರಿಸುವ ಮೊದಲು ಪಿಚ್‌ಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications