ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಮುಗಿಯುತ್ತಿದ್ದಂತೆಯೇ ಮತ್ತೊಂದು ಟಿ20 ಪಂದ್ಯಾವಳಿಗೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಲಿದೆ.
ಹೌದು, 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಜೂನ್ 2ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ. ಇನ್ನು ಐಸಿಸಿ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿಯಿರುವಾಗ ಭಾರತ ತಂಡದ ಆಯ್ಕೆಯ ಕುರಿತು ಚರ್ಚೆಗಳು ಜೋರಾಗಿವೆ.

ಅದರಲ್ಲೂ 2024ರ ಟಿ20 ವಿಶ್ವಕಪ್‌ಗಾಗಿ ಭಾರತೀಯ ಕ್ರಿಕೆಟ್ ತಂಡದ ವಿಕೆಟ್-ಕೀಪರ್ ಸ್ಥಾನದ ಆಯ್ಕೆಗಳ ಬಗ್ಗೆ ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ. ಕೆಎಲ್ ರಾಹುಲ್ 15 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದ್ದರೂ, ವಿಕೆಟ್-ಕೀಪರ್ ಪಾತ್ರಕ್ಕಾಗಿ ಎರಡನೇ ಆಯ್ಕೆಗೆ ಬಂದಾಗ ಇನ್ನೂ ಹಲವು ಆಯ್ಕೆಗಳಿವೆ.
ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಆಯ್ಕೆಗಳಾಗಿದ್ದು, ಕಳೆದ ವರ್ಷ ಯುವ ಆಟಗಾರ ಜಿತೇಶ್ ಶರ್ಮಾ ಕೂಡ ಪ್ರಭಾವಶಾಲಿಯಾಗಿದ್ದಾರೆ.
ಆದಾಗ್ಯೂ, ಟಿ20 ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆಗಾರರಿಗೆ ಒಂದು ಸ್ಪಷ್ಟವಾದ ಆಯ್ಕೆ ಇದೆ ಎಂದು ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.

"ರಿಷಭ್ ಪಂತ್ ಖಂಡಿತವಾಗಿಯೂ ಇರುತ್ತಾನೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ನಾನು ಸಂಜು ಸ್ಯಾಮ್ಸನ್ ಅವರನ್ನು ಸಹ ಆಯ್ಕೆ ಮಾಡುತ್ತೇನೆ. ಇಶಾನ್ ಕಿಶನ್ ತುಂಬಾ ಒಳ್ಳೆಯ ಫಾರ್ಮ್‌ಗೆ ಬಂದಿರುವುದರಿಂದ ಸ್ಪರ್ಧೆಯಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡದಿದ್ದರೆ ಇಶಾನ್ ಕಿಶನ್‌ರನ್ನು ತಂಡಕ್ಕೆ ಆಯ್ಕೆ ಮಾಡಬೇಕು," ಎಂದು ಆಡಮ್ ಗಿಲ್‌ಕ್ರಿಸ್ಟ್ ಕ್ರಿಕ್‌ಬಜ್‌ನಲ್ಲಿ ಹೇಳಿದರು.
ಶುಕ್ರವಾರದಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ ಪಂದ್ಯದ ಗೆಲುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ರಿಷಭ್ ಪಂತ್ 24 ಎಸೆತಗಳಲ್ಲಿ 41 ರನ್‌ಗಳ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ತಾನೂ ಇದ್ದೇನೆ ಎಂಬ ಸಂದೇಶ ರವಾನಿಸಿದರು.
2024ರ ಐಪಿಎಲ್ ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರು 2022ರಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದ ನಂತರ, ಆಡಿದ ಮೊದಲ ಪಂದ್ಯಾವಳಿಯಾಗಿದೆ. ಅವರ ಸದ್ಯದ ಫಾರ್ಮ್ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.
ರಿಷಭ್ ಪಂತ್ ಅವರು ಐಪಿಎಲ್ 2024ರಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ 157.72ರ ಅತ್ಯುತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ 194 ರನ್ ಗಳಿಸಿದ್ದಾರೆ.
ಇದೇ ವೇಳೆ ಇಶಾನ್ ಕಿಶನ್ ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತವಾದ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ಸಂಜು ಸ್ಯಾಮ್ಸನ್ ಆಡಿದ 6 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 246 ರನ್ ಗಳಿಸಿದ್ದರೆ, ಇಶಾನ್ ಕಿಶನ್ 182.95ರ ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಬಾರಿಸಿದ್ದಾರೆ.
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರ ಜಿತೇಶ್ ಶರ್ಮಾ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶವನ್ನು ಪಡೆದಿಲ್ಲ ಮತ್ತು ಅವರು ಅವಕಾಶವನ್ನು ಪಡೆದ ಸಂದರ್ಭಗಳಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ.
ಬಲಗೈ ಬ್ಯಾಟರ್-ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆಡಿದ ಐದು ಪಂದ್ಯಗಳಲ್ಲಿ 135.08ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 77 ರನ್ ಗಳಿಸಿದ್ದಾರೆ.