ಈ ಕ್ರಿಕೆಟ್ ದಿಗ್ಗಜ 2009ರಲ್ಲೇ ರೋಹಿತ್‌ನಲ್ಲಿ ನಾಯಕನ ಗುಣ ಹುಡುಕಿದ್ದರು ಎಂದ ಪ್ರಗ್ಯಾನ್ ಓಜಾ!

ಸದ್ಯ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ವರ್ಷದ ಆರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‍ಗೂ ಒಬ್ಬನೇ ನಾಯಕನನ್ನು ಹೊಂದಿದ್ದ ಟೀಮ್ ಇಂಡಿಯಾ ವರ್ಷಾಂತ್ಯದಲ್ಲಿ ಇಬ್ಬರಿಬ್ಬರು ನಾಯಕರನ್ನು ಹೊಂದಿದೆ.
ಹೌದು, ಈ ವರ್ಷದ ಆರಂಭದ ವೇಳೆಯಲ್ಲಿ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯ ಭಾರತ ಕ್ರಿಕೆಟ್ ತಂಡಕ್ಕೂ ಏಕೈಕ ನಾಯಕನಾಗಿ ವಿರಾಟ್ ಕೊಹ್ಲಿ ಇದ್ದರು. ಆದರೆ ವರ್ಷಾಂತ್ಯದ ವೇಳೆಗೆ ಅದೇ ವಿರಾಟ್ ಕೊಹ್ಲಿ ಕೇವಲ ಭಾರತ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ಉಳಿದುಕೊಂಡಿದ್ದಾರೆ. ಮೊದಲಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಇದೀಗ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಸಹ ವಜಾಗೊಂಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳೆರಡರ ನಾಯಕತ್ವವನ್ನು ಕಳೆದುಕೊಂಡ ನಂತರ ನೂತನ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೂಲಕ ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಿದ ರೋಹಿತ್ ಶರ್ಮಾ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಕೆಲಸ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಉಪನಾಯಕನಾಗಿಯೂ ಕೂಡ ಘೋಷಿಸಲ್ಪಟ್ಟಿದ್ದಾರೆ. ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಹಲವಾರು ಕ್ರಿಕೆಟಿಗರು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಇದೀಗ ಭಾರತದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ರೋಹಿತ್ ಶರ್ಮಾ ನಾಯಕನಾಗುತ್ತಿರುವುದರ ಕುರಿತು ಈ ಕೆಳಕಂಡಂತೆ ಮಾತನಾಡಿದ್ದಾರೆ..

2009ರಲ್ಲೇ ರೋಹಿತ್ ನಾಯಕನಾಗುತ್ತಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು ಎಂದಾ ಪ್ರಗ್ಯಾನ್ ಓಜಾ
ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪ್ರಗ್ಯಾನ್ ಓಜಾ 2009ರ ಸಮಯದಲ್ಲಿಯೇ ರೋಹಿತ್ ಶರ್ಮಾ ನಾಯಕನಾಗಲಿದ್ದಾನೆ ಎಂದು ಡೆಕ್ಕನ್ ಚಾರ್ಜರ್ಸ್ ತಂಡದ ಆಟಗಾರರು ಮಾತನಾಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ. ಹೌದು, ರೋಹಿತ್ ಶರ್ಮ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ 3 ವರ್ಷಗಳ ಕಾಲ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡುತ್ತಿದ್ದರು. ಆ ಸಮಯದಲ್ಲಿಯೇ ಆಟಗಾರನೋರ್ವನ ಪ್ರದರ್ಶನದ ಕುರಿತು ರೋಹಿತ್ ಶರ್ಮಾ ಉತ್ತಮ ರೀತಿಯಲ್ಲಿ ಊಹೆಗಳನ್ನು ಮಾಡುತ್ತಿದ್ದರು ಮತ್ತು ಕಾಲಕ್ರಮೇಣ ಫ್ರಾಂಚೈಸಿಯು ರೋಹಿತ್ ಶರ್ಮಾರ ಸಲಹೆಗಳನ್ನು ಪಡೆಯಲು ಮುಂದಾಯಿತು. ಹೀಗಾಗಿ ಆ ಸಮಯದಲ್ಲಿಯೇ ರೋಹಿತ್ ಶರ್ಮಾ ಆ್ಯಡಮ್ ಗಿಲ್ ಕ್ರಿಸ್ಟ್ ಬಳಿಕ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗುವುದು ಖಚಿತ ಎಂದು ತಂಡದ ಇತರೆ ಆಟಗಾರರು ಮಾತನಾಡಿಕೊಳ್ಳುತ್ತಿದ್ದರು ಎಂದು ಪ್ರಗ್ಯಾನ್ ಓಜಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ರೋಹಿತ್ ಶರ್ಮಾ ಉಪ ನಾಯಕನಾಗಬೇಕು ಎಂದು ಬಯಸಿದ್ದ ಗಿಲ್‌ಕ್ರಿಸ್ಟ್
ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಿದ್ದಾಗ ತಂಡದ ನಾಯಕನಾಗಿದ್ದ ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ ರೋಹಿತ್ ಶರ್ಮಾ ಉಪ ನಾಯಕನಾಗಬೇಕು ಎಂದು ಬಯಸಿದ್ದರು ಎಂಬುದನ್ನು ಪ್ರಗ್ಯಾನ್ ಓಜಾ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾರಲ್ಲಿ ನಾಯಕನ ಗುಣಗಳನ್ನು ಆ್ಯಡಮ್ ಗಿಲ್‌ಕ್ರಿಸ್ಟ್ ಆ ಸಮಯದಲ್ಲಿಯೇ ಕಂಡಿದ್ದರು ಎಂದು ಪ್ರಗ್ಯಾನ್ ಓಜಾ ತಿಳಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಇದುವರೆಗೂ ಒಟ್ಟು 10 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications