ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026ರ ತನ್ನ ತವರು ಪಂದ್ಯಗಳನ್ನು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತದೋ ಇಲ್ಲವೋ ಎಂಬ ಗೊಂದಲವಿದೆ. ಈ ನಡುವೆ ಆರ್‌ಸಿಬಿ ತಂಡ ಮಾರಾಟವಾಗುವ ಸುದ್ದಿ ಸಹ ವ್ಯಾಪಕವಾಗಿ ಹಬ್ಬುತ್ತಿದೆ. ವಿಶ್ವದ ಹೆಸರಾಂತ ತಂಡವನ್ನು ಖರೀದಿಸಲು ಹಲವು ಉದ್ಯಮಿಗಳು ಮುಂದಾಗಿದ್ದಾರೆ. ಆರ್‌ಸಿಬಿ ತಂಡವನ್ನು ಖರೀದಿಸಲು ಹೆಸರಾಂತ ಉದ್ಯಮಿ ಸಹ ಬಿಡ್ ಸಲ್ಲಿಸಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆ ಉದ್ಯಮಿ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಹೊಸ ಮಾಲೀಕರು ಸಿಗಲಿದ್ದಾರೆ. ಹಾಲಿ ಆರ್‌ಸಿಬಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತಂಡವನ್ನು ಮಾರಾಟ ಮಾಡಲು ಮುಂದಾಗಿದೆ. ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ನವೆಂಬರ್‌ನಲ್ಲಿ ಸ್ಪಷ್ಟ ಪಡಿಸಿತ್ತು. ಈಗ ಆರ್‌ಸಿಬಿ ತಂಡವನ್ನು ಖರೀದಿಸಲು ಹೆಸರಾಂತ ಉದ್ಯಮಿಗಳು ಮುಂದಾಗುತ್ತಿದ್ದಾರೆ. ಹೆಸರಾಂತ ತಂಡವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಮೆಡಿಸಿನ್ ಉದ್ಯಮಿ ಆದಾರ್ ಪೂನಾವಾಲಾ ಅವರು ಕಸರತ್ತು ನಡೆಸಿದ್ದಾರೆ.

ಆದಾರ್ ಪೂನಾವಾಲಾ ಅವರು ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ವೀಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಇವರು ಆರ್‌ಸಿಬಿ ತಂಡವನ್ನು ಖರೀದಿಸಲು ಬಿಡ್ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ಈ ಫ್ರಾಂಚೈಸಿ ಮಾರಟಕ್ಕಿದ್ದು, ಇದನ್ನು ಪಡೆಯಲು ಪ್ರಯತ್ನ ಹಾಗೂ ಬಿಡ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಇವರು ಆರ್‌ಸಿಬಿ ತಂಡವನ್ನು ಖರೀದಿಸಲು ಎಷ್ಟು ಹಣವನ್ನು ಹೂಡಲಿದ್ದಾರೆ ಎಂಬುದನ್ನು ಮಾತ್ರ ಇವರು ಬಹಿರಂಗ ಪಡಿಸಿಲ್ಲ.
ಡಿಯಾಜಿಯೊ ಕಂಪನಿ ಆರ್‌ಸಿಬಿ ಮಾಲೀಕತ್ವ ಹಸ್ತಾಂತರಿಸಲು ಬೇಕಾದ ತೆರೆ ಮರೆಯ ಕಾರ್ಯ ಭರದಿಂದ ನಡೆದಿದೆ. ಇದಕ್ಕೆ ಬೇಕಾದ ಪ್ರಾಥಮಿಕ ಹಂತದ ಸಿದ್ಧತೆಗಳನ್ನು ನಡೆಸಿದೆ. ತಂಡದ ಮಾರಟದ ಬಗ್ಗೆ ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (ಸೆಬಿ)ಗೆ ಮಾಹಿತಿ ನೀಡಿದೆ.
ಆದಾರ್ ಪೂನಾವಾಲಾ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ. ವಿಶ್ವದಲ್ಲೇ ಈ ಸಂಸ್ಥೆ ತನ್ನ ಉತ್ತಮ ಗುಣಮಟ್ಟದ ಔಷಧಿಗಳಿಗೆ ಹೆಸರುವಾಸಿ. ಈ ಸಂಸ್ಥೆಯನ್ನು 1966ರಲ್ಲಿ ಸೈರಸ್ ಪೂನಾವಾಲಾ ಸ್ಥಾಪಿಸಿದ ಸಂಸ್ಥೆ ಇಂದು 193 ದೇಶಗಳಲ್ಲಿ ತನ್ನ ಔಷಧಗಳನ್ನು ಸರಬರಾಜು ಮಾಡುತ್ತಿದೆ. ಆದಾರ್ ಅವರು ತಂದೆ ಸ್ಥಾಪಿಸಿದ ಕಂಪನಿಯನ್ನು 2001ರಲ್ಲಿ ಸೇರಿದರು. ಅಲ್ಲದೆ 2011ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಇವರ ಮುಂದಾಳತ್ವದಲ್ಲಿ ಕಂಪನಿ ಕೈಗೆಟಕುವ ದರದಲ್ಲಿ ಲಸಿಕೆ ನೀಡುವತ್ತ ಗಮನ ಹರಿಸಿತು. ಕೋವಿಡ್ 19 ಲಸಿಕೆ ತಯಾರಿಕೆ ಮತ್ತು ವಿತರಣೆಯಲ್ಲಿ ಸೀರಮ್ ದೊಡ್ಡ ಪಾತ್ರವನ್ನು ವಹಿಸಿತ್ತು. ಈ ಲಸಿಕೆಯ ಮೂಲಕ ಆದಾರ್ ಪೂನಾವಾಲಾ ಕಂಪನಿ ವಿಶ್ವದ ಗಮನ ಸೆಳೆಯಿತು.

ಔಷಧ ಕ್ಷೇತ್ರವನ್ನು ಹೊರತು ಪಡಿಸಿ ಆದಾರ್ ಪೂನಾವಾಲಾ ಅವರು ವೇಗವಾಗಿ ಬೆಳೆಯುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಯಾದ ಪೂನಾವಾಲಾ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿದ್ದಾರೆ.
ಆರ್‌ಸಿಬಿ ಕಂಪನಿ ಐಪಿಎಲ್ ಕ್ರೀಡೆಗಿಂತ ಹೆಚ್ಚಾಗಿ, ವರ್ಷವಿಡೀ ಹಲವು ಕಾರ್ಯಗಳನ್ನು ನಡೆಸುತ್ತಿದೆ. ಈ ಕ್ಷೇತ್ರದಲ್ಲಿ ಕೈ ಹಾಕಿ ತಮ್ಮ ಬೇರುಗಳನ್ನು ಮತ್ತಷ್ಟು ಪಸರಿಸಲು ಆದಾರ್ ಪೂನಾವಾಲಾ ಸಜ್ಜಾಗಿದ್ದಾರೆ.
ಐಪಿಎಲ್ 2008ರಲ್ಲಿ ಆರಂಭವಾದಾಗ ಆರ್‌ಸಿಬಿ ಲೀಗ್‌ನ ಎರಡನೇ ಅತ್ಯಂತ ದುಬಾರಿ ತಂಡವಾಗಿತ್ತು. ಆ ಸಮಯದಲ್ಲಿ ಈ ತಂಡವನ್ನು ಸುಮಾರು 450 ಕೋಟಿ ರೂ.ಗೆ ಖರೀದಿಸಲಾಗಿತ್ತು. 18 ವರ್ಷಗಳಲ್ಲಿ ಐಪಿಎಲ್ ಹೆಚ್ಚಿನ ಜನಮನ್ನಣೆ ಪಡೆದಂತೆ ಆರ್‌ಸಿಬಿ ಸಹ ಜನರ ಪ್ರೀತಿಯನ್ನು ಗಳಿಸಿದೆ. ಅಲ್ಲದೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದು, ಈ ಕಂಪನಿಯ ಮೌಲ್ಯ ಈಗ ಸಾವಿರ ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.