ತವರಿನಲ್ಲೇ ನಡೆಯಲಿರುವ ಐಸಿಸಿ ಪಂದ್ಯಾವಳಿಯಲ್ಲಿ ವಿಶ್ವದ ಇತರ ಒಂಬತ್ತು ತಂಡಗಳನ್ನು ಎದುರಿಸಲು ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಪ್ರಾರಂಭವಾಗಲಿದೆ.
ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ 2023ರ ಏಷ್ಯಾ ಕಪ್ ಟ್ರೋಫಿ ಗೆಲ್ಲುವ ಮೂಲಕ ವಿಶ್ವಕಪ್ ಗೆಲ್ಲುವ ದೊಡ್ಡ ಫೇವರಿಟ್ ತಂಡವಾಗಿದೆ. ಅಲ್ಲದೆ ಭಾರತ ಕ್ರಿಕೆಟ್ ತಂಡ 2013ರ ನಂತರ ಐಸಿಸಿ ಪ್ರಶಸ್ತಿ ಗೆದ್ದಿಲ್ಲ.
2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಗೆದ್ದಿದ್ದೇ ಕೊನೆಯ ಬಾರಿಯಾಗಿದೆ.

ಇದೀಗ 2023ರ ಏಕದಿನ ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಬುಧವಾರ, ಸೆಪ್ಟೆಂಬರ್ 20ರಂದು ಬಿಡುಗಡೆ ಮಾಡಲಾಗಿದೆ. ಇದನ್ನು 'ದಿಲ್ ಜಶ್ನ್ ಬೋಲೆ' ಎಂದು ಕರೆಯಲಾಗುತ್ತದೆ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮ ಜನಪ್ರಿಯ ಕಲಾವಿದೆ ಹಾಗೂ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ದಿನ, ಭಾರತ ತಂಡದ ಅಧಿಕೃತ ಕಿಟ್ ಪಾಲುದಾರ ಅಡಿಡಾಸ್ ತಮ್ಮ ಜೆರ್ಸಿ ಬಿಡುಗಡೆ ವಿಡಿಯೋವನ್ನು ಬಹಿರಂಗಪಡಿಸಿತು. ವಿಡಿಯೋದಲ್ಲಿ ಜನಪ್ರಿಯ ರಾಪರ್ ರಾಫ್ತಾರ್ ತಮ್ಮ ಜಾದೂ ಮಾಡಿದ್ದಾರೆ.
ಈ ರಾಪ್ ಅನ್ನು '3 ಕಾ ಡ್ರೀಮ್' ಎಂದು ಕರೆಯಲಾಗುತ್ತದೆ. ಇದು 1983 ಮತ್ತು 2011ರ ನಂತರ, ಇಡೀ ಭಾರತವು ತಮ್ಮ ಮೂರನೇ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು ಎಷ್ಟು ಹಪಾಹಪಿಸುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ವಿಡಿಯೋದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಹಲವು ಸದಸ್ಯರು ಕಾಣಿಸಿಕೊಂಡಿದ್ದಾರೆ.
ಭಾರತ ತಂಡದ ಇತರ ಸದಸ್ಯರಾದ ಕುಲದೀಪ್ ಯಾದವ್, ಶುಭ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಸಹ ವಿಡಿಯೋದ ಭಾಗವಾಗಿದ್ದಾರೆ. ವಿಡಿಯೋದಲ್ಲಿ ಆಟಗಾರರು ಧರಿಸಿರುವ ಜೆರ್ಸಿಯ ಭುಜದ ಮೇಲಿರುವ ತಿರಂಗಾ ಪಟ್ಟೆಗಳು ಹೊಸದಾಗಿ ಸೇರ್ಪಡೆಯಾದ ಒಂದು ಅಂಶವಾಗಿದೆ.

ಅಡಿಡಾಸ್ ತಮ್ಮ ಹೇಳಿಕೆಯಲ್ಲಿ ಭುಜಗಳ ಮೇಲಿನ ಮೂಲ ಮೂರು ಬಿಳಿ ಪಟ್ಟೆಗಳನ್ನು ರೋಮಾಂಚಕ ತ್ರಿವರ್ಣದೊಂದಿಗೆ ಬದಲಾಯಿಸಲಾಗುತ್ತಿದೆ ಎಂದು ಉಲ್ಲೇಖಿಸಿದೆ.
"1983 ಮತ್ತು 2011ರಲ್ಲಿ ಭಾರತದ ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವುಗಳನ್ನು ಸಂಕೇತಿಸುವ ಬಿಸಿಸಿಐ ಲೋಗೋ ಈಗ ಹೆಮ್ಮೆಯಿಂದ ಎರಡು ನಕ್ಷತ್ರಗಳನ್ನು ಹೊಂದಿದೆ," ಎಂದು ಅಡಿಡಾಸ್ ಹೇಳಿದೆ. ಅಡಿಡಾಸ್ ಬಿಡುಗಡೆ ಮಾಡಿರುವ ವಿಶ್ವಕಪ್ ಹಾಡಿನಲ್ಲಿ ಭಾರತ ತಂಡದ ಜೆರ್ಸಿ ಅನಾವರಣ ಇಲ್ಲಿದೆ.
2023ರ ವಿಶ್ವಕಪ್‌ಗೆ ಭಾರತ ತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಉತ್ತಮ ತಯಾರಿ ನಡೆಸಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ. ಭಾರತವು ಆಫ್ ಸ್ಪಿನ್ನರ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಆದರೆ, ಭಾರತ ತಂಡ ಇನ್ನೂ ಗುಣಮಟ್ಟದ ಸ್ಪಿನ್ನರ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಅವರು 8ನೇ ಸ್ಥಾನದಲ್ಲೂ ಬ್ಯಾಟಿಂಗ್ ಮಾಡಬೇಕು ಎನ್ನುವುದು ಬೇಡಿಕೆಯಾಗಿದೆ. ಅಕ್ಷರ್ ಪಟೇಲ್ ಪ್ರಸ್ತುತ ವಿಶ್ವಕಪ್ ತಂಡದ ಭಾಗವಾಗಿದ್ದು, ಅದೇ ಕೆಲಸವನ್ನು ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಆದರೆ ಅವರ ಗಾಯದ ಸಮಸ್ಯೆ ಭಾರತ ತಂಡಕ್ಕೆ ಬೇರೆ ಆಯ್ಕೆಗಳನ್ನು ಹುಡುಕುವಂತೆ ಮಾಡಿದೆ.