Aryaman Birla: ಆರ್‌ಸಿಬಿಯ ಹೊಸ ಮಾಲೀಕ ಆರ್ಯಮನ್ ಬಿರ್ಲಾ ಯಾರು?
Aryaman Birla: ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 1.78 ಬಿಲಿಯನ್ ಡಾಲರ್ (16,000 ಕೋಟಿ ರೂಪಾಯಿಗಿಂತ ಹೆಚ್ಚು) ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಈ ಫ್ರಾಂಚೈಸಿಗೆ ಆರ್ಯಮನ್ ಬಿರ್ಲಾ ಅವರು ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಇವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಐಪಿಎಲ್ ಫ್ರಾಂಚೈಸಿಯಾದ ಆರ್‌ಸಿಬಿ ತಂಡವನ್ನು ಮಂಗಳವಾರ ಸುಮಾರು 1.78 ಬಿಲಿಯನ್ ಡಾಲರ್ (ಅಂದರೆ 16,600 ಕೋಟಿಗೂ ಹೆಚ್ಚು) ಮೊತ್ತಕ್ಕೆ ಖರೀದಿ ಮಾಡಿದೆ. ಈ ಒಕ್ಕೂಟದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್ ಅವರ ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕ ಮೂಲದ ಬ್ಲ್ಯಾಕ್‌ಸ್ಟೋನ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಕೂಡ ಸೇರಿವೆ.

ಆರ್‌ಸಿಬಿ ಫ್ರಾಂಚೈಸಿಗೆ ನೂತನ ಅಧ್ಯಕ್ಷ
ಯುಕೆ-ಡಿಯಾಜಿಯೊ ಪಿಎಲ್‌ಸಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ಆರ್‌ಸಿಬಿ ತಂಡದ ಶೇಕಡ 100 ರಷ್ಟು ಪಾಲನ್ನು ಈ ಒಕ್ಕೂಟವು ಖರೀದಿಸಿದೆ. ಈ ಒಪ್ಪಂದವು ಆರ್‌ಸಿಬಿಯ ಪುರುಷರ ಮತ್ತು ಮಹಿಳಾ ತಂಡ ಎರಡನ್ನೂ ಒಳಗೊಂಡಿದೆ. ಈ ಸ್ವಾಧೀನದ ನಂತರ, ಆರ್ಯಮನ್ ಬಿರ್ಲಾ ಅವರು ಫ್ರಾಂಚೈಸಿಯ ನೂತನ ಅಧ್ಯಕ್ಷರಾಗಲಿದ್ದಾರೆ. ಪ್ರಸ್ತುತ ಈ ಸೀಸನ್ ಮುಗಿಯುವರೆಗೂ ಆರ್‌ಸಿಬಿ ಮಾಲೀಕತ್ವವನ್ನು ಡಿಯಾಜಿಯೊ ಹೊಂದಿರಲಿದೆ. ನಂತರ ಹಸ್ತಾಂತರ ಆಗಲಿದೆ ಎನ್ನುವ ಮಾಹಿತಿಯಿದೆ.
ಆರ್ಯಮನ್ ಬಿರ್ಲಾ ಯಾರು?
ಆರ್ಯಮನ್ ಬಿರ್ಲಾ ಅವರು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾದ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ. 28 ವರ್ಷದ ಇವರು ಈ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸಿದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಅವರು ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಮತ್ತು ಹರಾಜಿನಲ್ಲಿ 7 ಕೋಟಿ ರೂಪಾಯಿಗೆ ಖರೀದಿಸಲ್ಪಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಅನುಭವ ಹೊಂದಿದ್ದಾರೆ.
ಆರ್ಯಮನ್ ಬಿರ್ಲಾ ಕ್ರಿಕೆಟ್ ವೃತ್ತಿಜೀವನ
ಎಡಗೈ ಬ್ಯಾಟರ್ ಆಗಿರುವ ಇವರು ಮಧ್ಯಪ್ರದೇಶ ತಂಡದ ಪರವಾಗಿ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 414 ರನ್ ಗಳಿಸಿದ್ದಾರೆ. ಇದರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ತಂಡದ ವಿರುದ್ಧ ದಾಖಲಿಸಿದ ಒಂದು ಶತಕವೂ ಸೇರಿದೆ. ಇವರು ನಾಲ್ಕು ಲಿಸ್ಟ್-ಎ ಪಂದ್ಯಗಳಲ್ಲಿ 36 ರನ್ ಕೂಡ ಗಳಿಸಿದ್ದಾರೆ.
ಆರ್ಯಮನ್ 2018ರ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದು, ರಾಜಸ್ಥಾನ್ ರಾಯಲ್ಸ್ ತಂಡವು ಇವರನ್ನು 30 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಆದಾಗ್ಯೂ, ಅವರು ಆ ಫ್ರಾಂಚೈಸಿ ಪರವಾಗಿ ಒಂದು ಪಂದ್ಯವನ್ನೂ ಆಡಲಿಲ್ಲ ಮತ್ತು 2020ರ ಸೀಸನ್‌ಗಿಂತ ಮೊದಲು ತಂಡದಿಂದ ಬಿಡುಗಡೆಯಾದರು. ಅದೇ ಸಮಯದಲ್ಲಿ ಆರ್ಯಮನ್ ಅವರು ತೀವ್ರ ಆತಂಕದ ಸಮಸ್ಯೆಯಿಂದ ಹೊರಬರಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು.
"ನಾನು ಯಾವುದೋ ಸುಳಿಗೆ ಸಿಲುಕಿಕೊಂಡಂತೆ ಭಾಸವಾಗುತ್ತಿದೆ. ಇಲ್ಲಿಯವರೆಗೆ ಎಲ್ಲಾ ಸಂಕಷ್ಟಗಳ ನಡುವೆಯೂ ನನ್ನನ್ನು ನಾನೇ ಸಮಾಧಾನಪಡಿಸಿಕೊಂಡು ಬಂದಿದ್ದೇನೆ. ಆದರೆ ಈಗ ನನ್ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಎಲ್ಲದಕ್ಕಿಂತ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಅನಿಸುತ್ತಿದೆ. ನಮ್ಮೆಲ್ಲರ ಜೀವನದ ಹಾದಿಗಳು ವಿಭಿನ್ನವಾಗಿರುತ್ತವೆ. ಈ ಸಮಯವನ್ನು ನಾನು ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಹೊಸ ಮತ್ತು ವೈವಿಧ್ಯಮಯ ದೃಷ್ಟಿಕೋನಗಳಿಗೆ ಮನಸ್ಸನ್ನು ತೆರೆದಿಡಲು ಹಾಗೂ ಜೀವನದ ಉದ್ದೇಶವನ್ನು ಹುಡುಕಲು ಬಳಸಿಕೊಳ್ಳಲು ಬಯಸುತ್ತೇನೆ," ಎಂದು ಹೇಳಿದ್ದಾರೆ.
ಆರ್ಯಮನ್ ಬಿರ್ಲಾ ಮುಂದಿದೆ ದೊಡ್ಡ ಜವಾಬ್ದಾರಿ
ಅವರು ಮತ್ತೆ ಕ್ರಿಕೆಟ್‌ಗೆ ಮರಳಲಿಲ್ಲ ಮತ್ತು ಪ್ರಸ್ತುತ ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ "ಆರ್‌ಸಿಬಿಯ ಮುಂದಿನ ಹಂತದ ಬೆಳವಣಿಗೆಯನ್ನು ರೂಪಿಸಲು ಈ ಸಹಭಾಗಿತ್ವದಲ್ಲಿ ಒಂದಾಗಿರುವುದು ಒಂದು ಹೆಮ್ಮೆಯ ವಿಷಯ. ಈ ಪಾಲುದಾರಿಕೆಯು ಕ್ರೀಡೆ, ಮಾಧ್ಯಮ ಮತ್ತು ಗ್ರಾಹಕ ವ್ಯವಹಾರಗಳ ಬಗ್ಗೆ ಇರುವ ಆಳವಾದ ತಿಳುವಳಿಕೆಯನ್ನು ಒಂದೆಡೆ ಸೇರಿಸುತ್ತದೆ," ಎಂದು ಆರ್ಯಮನ್ ಬಿರ್ಲಾ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಆರ್‌ಸಿಬಿ ಖರೀದಿ ಮಾಡಿದ ಈ ಆರ್ಯಮನ್ ಬಿರ್ಲಾ ಯಾರು ಎನ್ನುವ ಪ್ರಶ್ನೆಗೆ ಸಂಪೂರ್ಣ ಉತ್ತರ ಸಿಕ್ಕಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications