ತವರಿನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಭಾರತ ತಂಡದ ಕಳೆದ 12 ವರ್ಷಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋತಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧ ಗೆಲುವಿಗಾಗಿ ಪರದಾಟ ನಡೆಸುತ್ತಿದೆ.
ಬೆಂಗಳೂರಿನೆ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 36 ವರ್ಷಗಳ ಬಳಿಕ ಸೋಲು ಕಂಡಿತ್ತು. ಈ ಸೋಲಿನ ಬಳಿಕ
ಟೀಮ್ ಇಂಡಿಯಾ ಹೆಸರಿನಲ್ಲಿ ಅನಗತ್ಯ ದಾಖಲೆಗಳು ಸೃಷ್ಟಿಯಾಗಿದ್ದವು. ಇದೀಗ ಪುಣೆಯಲ್ಲಿ ನಡೆಯಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 156 ರನ್‌ಗಳಿಗೆ ಆಲೌಟ್ ಆದ ಬಳಿಕ ಟೀಮ್ ಇಂಡಿಯಾ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ದಾಖಲಾಗಿದೆ.

ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಪರಿಣಾಮ ಭಾರತ ಕೇವಲ 156 ರನ್ ಗಳಿಗೆ ಕುಸಿದಿದೆ. ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರ ಅದ್ಭುತ ಸ್ಪಿನ್ ದಾಳಿಯನ್ನು ಭಾರತದ ಬ್ಯಾಟರ್‌ಗಳು ಎದುರಿಸಲು ಸಾಧ್ಯವಾಗಲಿಲ್ಲ. ಸ್ಯಾಂಟ್ನರ್ ತಮ್ಮ ಸ್ಪಿನ್ ಮ್ಯಾಜಿಕ್ ಬೌಲಿಂಗ್‌ನಿಂದ 7 ವಿಕೆಟ್ ಪಡೆದು ಮಿಂಚಿದರು.
ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತ 156 ರನ್‌ಗಳಿಗೆ ಆಲೌಟ್ ಆದರೆ, ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ 259 ರನ್‌ಗಳ ಆಧಾರದ ಮೇಲೆ 103 ರನ್‌ಗಳ ಮುನ್ನಡೆ ಸಾಧಿಸಿದೆ. ಬೆಂಗಳೂರು ಟೆಸ್ಟ್ ಪಂದ್ಯದಲ್ಲೂ ಕಿವೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. 2001ರ ನಂತರ ತವರಿನಲ್ಲಿ ಭಾರತದ ವಿರುದ್ಧ ಪ್ರವಾಸಿ ತಂಡ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿರುವುದು ಇದೇ ಮೊದಲು. 23 ವರ್ಷಗಳಿಂದ ಈ ದಾಖಲೆಯನ್ನು ಮಾಡಲು ಯಾವ ತಂಡಕ್ಕೂ ಭಾರತ ಬಿಟ್ಟಿರಲಿಲ್ಲ.
ಇದೀಗ 23 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅನಗತ್ಯ ದಾಖಲೆಯನ್ನು ಹೊಂದಿದೆ. 2001ರಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿತ್ತು. ವಾಂಖೆಡೆಯಲ್ಲಿ 173 ರನ್ ಮತ್ತು ಈಡನ್ ಗಾರ್ಡನ್‌ನಲ್ಲಿ 274 ರನ್‌ಗಳ ಮುನ್ನಡೆ ಸಾಧಿಸಿ ಕಾಂಗೂರು ಪಡೆ ದಾಖಲೆ ಮಾಡಿತ್ತು.
ಬೆಂಗಳೂರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ 46 ರನ್ ಆಲೌಟ್ ಆಗುವ ಮೂಲಕ ಭಾರತ ತವರಿನಲ್ಲಿ ಮುಖಭಂಗ ಅನುಭವಿಸಿತ್ತು. ಈಗ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಎಡುವಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿರುವಂತೆ ಕಾಣುತ್ತಿದೆ. ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದ್ದು, ಪುಣೆ ಟೆಸ್ಟ್ ಪಂದ್ಯವನ್ನು ಗೆದ್ದರೆ ಸರಣಿ ಕೈ ವಶ ಮಾಡಿಕೊಳ್ಳಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಆಗ್ರಸ್ಥಾನದಲ್ಲಿ ಮುಂದೆವರೆಯಬೇಕಾದರೆ ಪುಣೆ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾಗಿದೆ.