ಬ್ಯಾನ್‌ಕ್ರಾಫ್ಟ್ ಹೇಳಿಕೆ ಬಳಿಕ ಮತ್ತೆ 'ಚೆಂಡು ವಿರೂಪ' ಪ್ರಕರಣದ ತನಿಖೆಗೆ ಮುಂದಾದ ಆಸ್ಟ್ರೇಲಿಯಾ!

ಸಿಡ್ನಿ: ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿರೂಪ ನಡೆಸಿದ ಪ್ರಕರಣವನ್ನು ಮರು ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಪಾಲುದಾರನಾಗಿದ್ದ ಆಸ್ಟ್ರೇಲಿಯಾ ಆರಂಭಿಕ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಕಾಮೆಂಟ್ ನೀಡಿದ ಬಳಿಕ ಪ್ರಕರಣ ಮತ್ತೆ ತನಿಖೆಗೆ ಒಳಗಾಗುವುದರಲ್ಲಿದೆ. ಈ ಮೂಲಕ 2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ಕ್ರಿಕೆಟ್ ಜಗತ್ತಿನ ಕಪ್ಪು ಚುಕ್ಕೆಯ ಘಟನೆ ಮತ್ತೆ ಬೆಳಕಿಗೆ ಬರಲಿದೆ.
ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿದ್ದ ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ವೇಳೆ ಕೇಪ್‌ಟೌನ್‌ನಲ್ಲಿ ನಡೆದಿದ್ದ 3ನೇ ಟೆಸ್ಟ್ ವೇಳೆ ಚೆಂಡು ವಿರೂಪ ಪ್ರಕರಣ ನಡೆದಿತ್ತು.

ಘಟನೆ ಮತ್ತೆ ಬೆಳಕಿಗ್ಯಾಕೆ ಬಂತು?
ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹ್ಯಾಮ್ ಪರ ಆಡುತ್ತಿರುವ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಅವರು, ಗಾರ್ಡಿಯನ್ ಸಂದರ್ಶಕ ಡೊನಾಲ್ಡ್ ಮೆಕ್ರೇ ಎದುರು ಮಾಡಿದ್ದ ಕಾಮೆಂಟ್‌ನಿಂದಾಗಿ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಸಂದರ್ಶನದ ವೇಳೆ ಬ್ಯಾನ್‌ಕ್ರಾಫ್ಟ್ ಅವರು ಚೆಂಡು ವಿರೂಪ ಪ್ರಕರಣದ ಬಗ್ಗೆ ಬಹುಶಃ ಆಸ್ಟ್ರೇಲಿಯಾದ ಬಹಳಷ್ಟು ಬೌಲರ್‌ಗಳಿಗೆ ಗೊತ್ತಿರಬಹುದು ಎಂದಿದ್ದರು. ಹೀಗಾಗಿ ಆಸ್ಟ್ರೇಲಿಯಾ ಮತ್ತೆ ಪ್ರಕರಣ ತನಿಖೆ ನಡೆಸಲು ಎದುರು ನೋಡುತ್ತಿದೆ.

ಬ್ಯಾನ್‌ಕ್ರಾಫ್ಟ್ ಹೇಳಿದ್ದೇನು?
ಸಂದರ್ಶನದ ವೇಳೆ ಬ್ಯಾನ್‌ಕ್ರಾಫ್ಟ್, 'ನೋಡಿ, ನಾನೇನು ಮಾಡಲು ಬಯಸಿದ್ದೀನೋ ಅದು ನನ್ನ ಜವಾಬ್ದಾರಿ. ನನ್ನ ನಡೆಗೆ ನಾನೇ ಹೊಣೆ. ಆದರೆ ನಾನೇನು ಮಾಡಿದ್ದೆನೋ ಅದು ಎಲ್ಲಾ ಬೌಲರ್‌ಗಳಿಗೂ ಲಾಭ ತರುತ್ತಿತ್ತು. ಹೀಗಾಗಿ ನಾವು ಚೆಂಡು ವಿರೂಪಗೊಳಿಸಿದ್ದರ ಬಗ್ಗೆ ಬಹುಶಃ ಇನ್ನೂ ಕೆಲ ಬೌಲರ್‌ಗಳಿಗೆ ಮಾಹಿತಿಯಿರಬಹುದು. ಹೀಗಾಗಿ ಅವರು ತಾನೇ ಮುಂದೆ ಬಂದು ವಿವರಿಸಬಹುದು,' ಎಂದು ಪ್ರಕರಣದ ಬಗ್ಗೆ ಇನ್ನೂ ಕೆಲವರಿಗೆ ಅರಿವಿರುವ ಬಗ್ಗೆ ಸುಳಿವು ನೀಡಿದ್ದಾರೆ.

ಚೆಂಡು ವಿರೂಪ ಘಟನೆಯ ಹಿನ್ನೆಲೆ
ಕೇಪ್‌ಟೌನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತೃತೀಯ ಟೆಸ್ಟ್ ವೇಳೆ ಪಂದ್ಯ ಗೆಲ್ಲುವ ಒತ್ತಡದಲ್ಲಿ ಆಸ್ಟ್ರೇಲಿಯಾವಿತ್ತು. ಹೀಗಾಗಿ ಬ್ಯಾನ್‌ಕ್ರಾಫ್ಟ್ ಅವರು ಚೆಂಡಿನ ಹೊರ ಪದರವನ್ನು ಸ್ಯಾಂಡ್ ಪೇಪರ್‌ನಿಂದ ತಿಕ್ಕಿ ಹಾಳುಗೆಡವಿದ್ದರು. ಇದು ವಿಡಿಯೋದಲ್ಲಿ ಸೆರೆಯಾಗಿತ್ತು. ತನಿಖೆ ನಡೆದಾಗ ಈ ಘಟನೆಯ ರುವಾರಿಗಳಾಗಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಟೀವ್ ಮತ್ತು ಡೇವಿಡ್‌ಗೆ 12 ತಿಂಗಳು, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಶಿಕ್ಷೆಯಾಗಿತ್ತು. ಅಂದ್ಹಾಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರಿಂದ ದಕ್ಷಿಣ ಆಫ್ರಿಕಾ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications