ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ನವದೆಹಲಿ: ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದ ರಮೇಶ್ ಪೊವಾರ್ ಮತ್ತೆ ಮುಖ್ಯ ಕೋಚ್ ಆಗಿ ಆರಿಸಲ್ಪಟ್ಟಿದ್ದಾರೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತೆ ಪವಾರ್‌ಗೆ ಮಣೆ ಹಾಕಿದೆ. ಈ ಬೆಳವಣಿಗೆಯ ಮಧ್ಯೆ ಮಹಿಳಾ ಕ್ರಿಕೆಟ್ ಆಯ್ಕೆದಾರರ ಕಡೆಗೆ ಎಲ್ಲರ ಗಮನ ಹರಿಯುವಂತಾಗಿದೆ. ವನಿತಾ ತಂಡ ಮತ್ತು ಆಯ್ಕೆ ಸಮಿತಿಯಲ್ಲಿನ ಈಚಿನ ಬೆಳವಣಿಗೆಗಳನ್ನು ಗಮನಿಸಿದರೆ ಆಯ್ಕೆ ಸಮಿತಿಯೊಳಗೆ ಏನೋ ಸರಿಯಿಲ್ಲ ಎಂಬ ಅನುಮಾನ ಮೂಡುವಂತಿದೆ.
ನೀತು ಡೇವಿಡ್ ಮುಂದಾಳತ್ವದ ಆಯ್ಕೆ ಸಮಿತಿ ಪ್ರಮುಖ ಸರಣಿಗಳಿಗೆ ತಂಡಗಳನ್ನು ಆಯ್ಕೆ ನಡೆಸುತ್ತಿದೆ. ಇತ್ತೀಚೆಗೆ ಈ ಆಯ್ಕೆ ಸಮಿತಿ ಆರಿಸಿದ್ದ ತಂಡ ಅಂಥ ಪ್ರದರ್ಶನ ನೀಡಿರಲಿಲ್ಲ. ಮೇಲಾಗಿ ಈ ತಂಡ ಅನೇಕ ಪಾಲುದಾರರ ಕೋಪಕ್ಕೆ ಕಾರಣವಾಗಿತ್ತು. ಆವತ್ತಿನಿಂದಲೂ ಮಹಿಳಾ ಆಯ್ಕೆ ಸಮಿತಿಯಲ್ಲಿ ಏನೋ ಸರಿಯಿಲ್ಲ ಎಂಬ ಅನುಮಾನ ಬಲಗೊಳ್ಳತೊಡಗಿದೆ.

ಶೆಫಾಲಿ ವರ್ಮಾ, ಶಿಖಾ ಪಾಂಡೆ ಕಡೆಗಣನೆ
ಇತ್ತೀಚೆಗೆ ನಡೆದ ಭಾರತದ ವನಿತೆಯರು ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ನಡುವಿನ ಸರಣಿಯಲ್ಲಿ ಏಕದಿನ ಸರಣಿಯಿಂದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ಶೆಫಾಲಿ ವರ್ಮಾಗೆ ಸ್ಥಾನ ನೀಡಿರಲಿಲ್ಲ. ಅಲ್ಲದೆ ಸೀಸನ್ ಪ್ರಮುಖ ವೇಗಿ ಶಿಖಾ ಪಾಂಡೆಯನ್ನು ಸರಣಿಯಲ್ಲಿ ಆಡಿಸಲೇಯಿಲ್ಲ. ಯಾಕೆ ಹೀಗೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕೆ ಆಯ್ಕೆ ಸಮಿತಿಯವರು ಸರಿಯಾದ ಉತ್ತರವೂ ನೀಡಿರಲಿಲ್ಲ.

ಭಾರತದ ವನಿತೆಯರಿಗೆ ಹೀನಾಯ ಸೋಲು
ಭಾರತಕ್ಕೆ ಪ್ರವಾಸ ಬಂದಿದ್ದ ದಕ್ಷಿಣ ಆಫ್ರಿಕಾವನಿತೆಯರ ವಿರುದ್ಧ ಭಾರತದ ವನಿತೆಯರು ಹೀನಾಯ ಪ್ರದರ್ಶನ ನೀಡಿದ್ದರು. ಭಾರತೀಯ ವನಿತಾ ತಂಡ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1ರ ಸೋಲು, 3 ಪಂದ್ಯಗಳ ಟಿ20ಐ ಸರಣಿಯಲ್ಲಿ 2-1ರ ಸೋಲನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣ ದುರ್ಬಲ ತಂಡದ ಆಯ್ಕೆ ಎಂದು ಕ್ರಿಕೆಟ್ ಬಲ್ಲ ಯಾರಿಗಾದರೂ ಅರ್ಥವಾಗುವಂತಿತ್ತು. ಅಲ್ಲದೆ ಡಬ್ಲ್ಯೂವಿ ರಾಮನ್ ಅವರನ್ನು ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸಿ ಮತ್ತೆ ರಮೇಶ್ ಪೊವಾರ್‌ಗೆ ಕೋಚ್ ಜವಾಬ್ದಾರಿ ನೀಡಿರುವುದೂ ಚರ್ಚೆಗೆ ಕಾರಣವಾಗಿದೆ.

ಆಯ್ಕೆ ಸಮಿತಿ ಕೊಟ್ಟ ಕಾರಣವೇನು ಗೊತ್ತಾ?
ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಸರಣಿಯಲ್ಲಿ ಶಿಖಾ ಪಾಂಡೆ ಮತ್ತು ಶೆಫಾಲಿ ವರ್ಮಾ ಕಡೆಗಣಿಸಿದ್ದೇಕೆ ಎಂದು ಬಿಸಿಸಿಐ ಆಯ್ಕೆ ಸಮಿತಿಯವರಲ್ಲಿ ಪ್ರಶ್ನಿಸಿದಾಗ, ಶಿಖಾ ಅವರಲ್ಲಿ ಫಿಟ್ನೆಸ್ ಕೊರತೆಯಿತ್ತು. ಶೆಫಾಲಿಗೆ ಏಕದಿನದಲ್ಲಿ ವಿಶ್ರಾಂತಿ ಬೇಕಿತ್ತು ಎಂಬ ಉತ್ತರ ಬಂದಿತ್ತು. ಅಸಲಿಗೆ, ವನಿತಾ ತಂಡದ ಆಟಗಾರ್ತಿಯರು ವಿಮೆನ್ಸ್ ಟಿ20 ಚಾಲೆಂಜ್‌ನ ಕೆಲ ಪಂದ್ಯಗಳಲ್ಲಷ್ಟೇ ಆಡಿದ್ದರಿಂದ ಇಲ್ಲಿ ವಿಶ್ರಾಂತಿಯ ವಿಚಾರ ಮುಖ್ಯ ಅನ್ನಿಸುವುದಿಲ್ಲ. ಜೊತೆಗೆ ಶಿಖಾ ಆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರ ಫಿಟ್ನೆಸ್ ಬಗೆಗಿನ ಆಯ್ಕೆದಾರರ ಹೇಳಿಕೆಯೂ ಸಮಾಧಾನ ಮೂಡಿಸುತ್ತಿರಲಿಲ್ಲ.

ಬೇರೇನೋ ನಡೆಯುತ್ತಿರುವ ಗುಮಾನಿ
ಮಹಿಳಾ ತಂಡಕ್ಕೆ ಈಗ ರಮೇಶ್ ಪೊವಾರ್ ಮುಖ್ಯ ಕೋಚ್ ಆಗಿ ಆಯ್ಕೆಯಾಗುವುದಕ್ಕೂ ಮುನ್ನ ಕೋಚ್ ಆಗಿದ್ದ ಡಬ್ಲ್ಯೂವಿ ರಾಮನ್ ಅವರಿಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆರಿಸಲಾದ ತಂಡ ಖುಷಿ ನೀಡಿರಲಿಲ್ಲ ಎಂದು ಅವರೇ ಹೇಳಿದ್ದರು. ಬಲ್ಲ ಮಾಹಿತಿಯ ಪ್ರಕಾರ, ಆಯ್ಕೆದಾರರು ಹಿರಿಯ ಆಟಗಾರ್ತಿಯ ಮಧ್ಯೆ ನಡೆಯುತ್ತಿರುವ ಘರ್ಷಣೆಯಿಂದ ಒಳ್ಳೆಯ ತಂಡ ಆರಿಸಲ್ಪಡುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಆಯ್ಕೆದಾರರು ವೈಯಕ್ತಿಕ ನಿಲುವುಗಳನ್ನು ಬದಿಗಿಟ್ಟು ಒಳ್ಳೆ ತಂಡ ಆರಿಸುವ ಕಡೆ ಗಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ಇದು ಭಾರತೀಯ ವನಿತಾ ತಂಡದ ಹಿನ್ನಡೆಗೆ ಗಂಭೀರ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications