
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದರು. ಇದೀಗ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುರೇಶ್ ರೈನಾಗೆ ಪತ್ರವನ್ನು ಬರೆದು ಶುಭ ಹಾರೈಸಿದ್ದಾರೆ.
ಗುರುವಾರ ಪ್ರಧಾನಿಯ ಪತ್ರವನ್ನು ಎಂಎಸ್ ಧೋನಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಪ್ರಧಾನಿ ಪತ್ರಕ್ಕೆ ಧನ್ಯವಾದವನ್ನು ಸಲ್ಲಿಸಿದ್ದರು. ಇದೀಗ ಸುರೇಶ್ ರೈನಾಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರವೂ ಕೂಡ ಬಹಿರಂಗವಾಗಿದೆ. ಈ ಪತ್ರದಲ್ಲಿ ಸುರೇಶ್ ರೈನಾ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ.
"ನಾವು ಆಡುವಾಗ ರಾಷ್ಟ್ರಕ್ಕಾಗಿ ನಮ್ಮ ರಕ್ತ ಮತ್ತು ಬೆವರನ್ನು ನೀಡುತ್ತೇವೆ. ಪ್ರಧಾನಮಂತ್ರಿಗಿಂತಲೂ ಹೆಚ್ಚಾಗಿ ಜನರಿಂದ ಪ್ರೀತಿಸಲ್ಪಡುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗಿಂತ ದೊಡ್ಡ ಪ್ರಶಂಸೆಯಾಗಿದೆ. ಧನ್ಯವಾದಗಳು" ಎಂದು ಸುರೇಶ್ ರೈನಾ ಪ್ರಧಾನಿಯ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲ ಅನಿವಾರ್ಯ ಸಂದರ್ಭಗಳಲ್ಲಿ ಬೌಲಿಂಗ್ ಮೂಲಕ ತಂಡಕ್ಕೆ ಯಶಸ್ಸನ್ನು ನೀಡಿದ್ದೀರಿ. ಕ್ಷೇತ್ರ ರಕ್ಷಣೆಯಲ್ಲೂ ಅದ್ಭುತ ಕೊಡುಗೆಯನ್ನು ತಂಡಕ್ಕೆ ನೀಡಿದ್ದಿರಿ ಎಂದು ಪ್ರಧಾನಿ ರೈನಾಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.
ಈ ಪತ್ರದಲ್ಲಿ ಪ್ರಧಾನಿ 2011ರ ವಿಶ್ವಕಪ್ ಗೆಲುವಿನಲ್ಲಿ ರೈನಾ ಪಾತ್ರವನ್ನು ಸ್ಮರಿಸಿಕೊಂಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ತಂಡದ ವಿರುದ್ದ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಮ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೈನಾ ತಂಡಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದ್ದಾರೆ. ಅಂದಿನ ಪಂದ್ಯದಲ್ಲಿ ರೈನಾ ಬಾರಿಸಿದ ಸುಂದರ ಕವರ್‌ಡ್ರೈವ್‌ಗಳನ್ನು ನೇರವಾಗಿ ವೀಕ್ಷಿಸಿ ಸಂತಸ ಪಟ್ಟಿರುವುದಾಗಿ ಹೇಳಿದ್ದಾರೆ.