ಕೊಹ್ಲಿ ನಾಯಕತ್ವದ ವಿವಾದ: ದ.ಆಫ್ರಿಕಾ ಪ್ರವಾಸದ ನಂತರ ಮತ್ತೆ ಚರ್ಚೆ, ಹೊಸ ನಿರ್ಧಾರ ಎಂದ ಬಿಸಿಸಿಐ!

2021ರಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ಅವರ ಅಭಿಮಾನಿಗಳು ಖುಷಿಯ ವಿಚಾರವನ್ನು ಕೇಳಿದ್ದಕ್ಕಿಂತ ಬೇಸರದ ವಿಚಾರಗಳನ್ನು ಕೇಳಿದ್ದೇ ಹೆಚ್ಚು. ಹೌದು, 2021 ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂದೇ ಹೇಳಬಹುದು. ಈ ವರ್ಷ ನಡೆದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡು ರನ್ನರ್ ಅಪ್ ಆಗಿ ಹೊರಹೊಮ್ಮಿದಾಗಿನಿಂದ ವಿರಾಟ್ ಕೊಹ್ಲಿ ಹೆಗಲೇರಿದ ದುರಾದೃಷ್ಟ ಇಂದಿಗೂ ಸಹ ಕೆಳಗಿಳಿದಂತೆ ಕಾಣುತ್ತಿಲ್ಲ.
ಹೌದು, ಮೊದಲಿಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಸೋತ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ನಂತರ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಸೋಲುಂಡಿತು. ಹೀಗೆ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿಯೂ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿ ಭಾರತ ಏಕದಿನ ಮತ್ತು ಭಾರತ ಟೆಸ್ಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸಲು ತೀರ್ಮಾನಿಸಿದರು. ಅದರಂತೆಯೇ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ವಿರಾಟ್ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಹಾಗೂ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿತು.
ಇನ್ನು ಈ ನಾಯಕತ್ವದ ವಿಚಾರ ಇಷ್ಟಕ್ಕೇ ಮುಗಿಯಲಿಲ್ಲ. ಬದಲಾಗಿ ಭಾರತ ಏಕದಿನ ತಂಡದ ನಾಯಕತ್ವದ ಬದಲಾವಣೆಗೂ ಸಹ ಕೈ ಹಾಕಿದ ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂಬುದನ್ನು ಕೂಡ ತಿಳಿಸಿತು. ಹೀಗೆ ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಯಿಂದ ಕಸಿದುಕೊಂಡ ಕಾರಣ ರೋಹಿತ್ ಶರ್ಮಾ ಮತ್ತು ಕೊಹ್ಲಿ ನಡುವಿನ ಬಾಂಧವ್ಯ ಹದಗೆಟ್ಟಿದೆ ಎನ್ನಲಾಗುತ್ತಿದ್ದು, ಸದ್ಯ ರೋಹಿತ್ ಶರ್ಮಾ ಗಾಯದ ಕಾರಣ ತಿಳಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರೆ, ವೈಯಕ್ತಿಕ ಕಾರಣಗಳನ್ನು ನೀಡಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಮನಸ್ತಾಪ ಇರುವುದರಿಂದಲೇ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿದ್ದು ಈ ಕುರಿತಾಗಿ ಖಾಸಗಿ ವೆಬ್‌ಸೈಟ್‌ವೊಂದರ ಜೊತೆ ಬಿಸಿಸಿಐನ ಅಧಿಕಾರಿಯೋರ್ವರು ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಇದನ್ನು ಚಿಕ್ಕ ವಿಷಯವೆಂದು ಪರಿಗಣಿಸಿಲ್ಲ
ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿರುವುದನ್ನು ವಿರಾಟ್ ಕೊಹ್ಲಿ ಸಣ್ಣ ವಿಚಾರ ಎಂದು ಪರಿಗಣಿಸಿಲ್ಲ ಎಂಬುದು ತಿಳಿದಿದೆ ಎಂದಿರುವ ಬಿಸಿಸಿಐ ಅಧಿಕಾರಿಯೋರ್ವರು ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಏಕದಿನ ಸರಣಿಯಿಂದ ದೂರ ಉಳಿದಿದ್ದಾರೆ ಆದರೆ ನಡೆಯುತ್ತಿರುವ ಯಾವುದನ್ನು ಕೂಡ ಸುಲಭವಾಗಿ ಸ್ವೀಕರಿಸುವುದು ಅಸಾಧ್ಯ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ನಂತರ ಎಲ್ಲವನ್ನೂ ಸರಿಪಡಿಸಲಿದ್ದೇವೆ
ಇನ್ನೂ ಮುಂದುವರಿದು ಮಾತನಾಡಿರುವ ಆ ಬಿಸಿಸಿಐ ಅಧಿಕಾರಿ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರನ್ನು ಕೂರಿಸಿ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗೂ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ್ದು ತಂಡದ ಸ್ವಂತ ನಿರ್ಧಾರವಾಗಿತ್ತು ಮತ್ತು ಇದಕ್ಕೆ ವಿರಾಟ್ ಕೊಹ್ಲಿ ಸ್ವಾರ್ಥಿಯಾಗಿ ನಡೆದುಕೊಳ್ಳಬಾರದಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ತಂಡಕ್ಕೆ ಮಾರಕವಾಗಿದ್ದು ದಕ್ಷಿಣ ಆಫ್ರಿಕಾ ಸರಣಿ ಮುಗಿದ ನಂತರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆ ಬಿಸಿಸಿಐ ಅಧಿಕಾರಿ ಭರವಸೆ ನೀಡಿದ್ದಾರೆ. ಈ ಮೂಲಕ ಬಿಸಿಸಿಐ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆ ಚರ್ಚೆ ನಡೆಸಲಿದ್ದು ಸದ್ಯಕ್ಕೆ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಲಿದೆ. ಈ ಮೂಲಕ ಸದ್ಯ ಹುಟ್ಟಿಕೊಂಡಿರುವ ಸಮಸ್ಯೆಗಳಿಗೆ ಹೊಸ ಪರಿಹಾರವಂತೂ ಲಭಿಸಲಿದ್ದು ಪುನಃ ನಾಯಕತ್ವ ಬದಲಾವಣೆಯೇನಾದರೂ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳ ವೇಳಾಪಟ್ಟಿ
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು ಇದರ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications