ಭಾರತ ವಿರುದ್ಧದ 5 ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಕಂಡಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಪ್ರವಾಸಿ ತಂಡ ಗೆಲುವು ಸಾಧಿಸುವ ಆಸೆ ಕಮರಿಲ್ಲ. ಇದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್ ಟಾಮ್ ಹಾರ್ಟ್ಲಿ.
ಇಂಗ್ಲೆಂಡ್ ತಂಡದ ಪರ ಏಕಾಂಗಿಯಾಗಿ ಟೀಂ ಇಂಡಿಯಾಕ್ಕೆ ಕಾಟ ನೀಡುತ್ತಿರುವ ಸ್ಪಿನ್ ಬೌಲರ್. ಭಾರತ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ ಟಾಮ್ ಹಾರ್ಟ್ಲಿ ಇಂಗ್ಲೆಂಡ್ ತಂಡಕ್ಕೆ ನಿಜವಾದ ಟ್ರಂಪ್ ಕಾರ್ಡ್ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವುದರ ಜೊತೆಗೆ ಬ್ಯಾಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಹಾರ್ಟ್ಲಿ ಈ ಸರಣಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್‌ಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಇಷ್ಟೇ ಅಲ್ಲ, ವಿಕೆಟ್ ಪಡೆಯುವ ವಿಚಾರದಲ್ಲಿ ಟಾಮ್ ಹಾರ್ಟ್ಲಿ ಅನುಭವಿ ಸ್ಪಿನ್ನರ್‌ಗಳಾದ ಅಶ್ವಿನ್, ಅಕ್ಷರ್ ಪಟೇಲ್ ಅವರಿಗಿಂತ ಮುಂದಿದ್ದಾರೆ.
24 ವರ್ಷದ ಟಾಮ್ ಹಾರ್ಟ್ಲಿ ಭಾರತ ವಿರುದ್ಧ ಹೈದರಾಬಾದ್ ಟೆಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಹಾರ್ಟ್ಲಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತ ವಿರುದ್ಧ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಇಲ್ಲಿಯವರೆಗೆ ಹಾರ್ಟ್ಲಿ ಸರಣಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, ಹಾರ್ಟ್ಲಿ ಬ್ಯಾಟ್‌ನಿಂದಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮತ್ತು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 114 ರನ್ ಗಳಿಸಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಅವರು ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 94 ರನ್ ಗಳಿಸಲು ಶಕ್ತರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ರೋಹಿತ್ ಶರ್ಮಾ ಅವರಿಗಿಂತ ಹಿಂದಿದ್ದು, ಕೇವಲ 92 ರನ್ ಗಳಿಸಿದ್ದಾರೆ. ಅಶ್ವಿನ್ ವಿಕೆಟ್ ಪಡೆಯುವಲ್ಲಿಯೂ ಹಾರ್ಟ್ಲಿಗಿಂತ ಹಿಂದೆ ಬಿದ್ದಿದ್ದಾರೆ. ಎರಡು ಪಂದ್ಯಗಳಲ್ಲಿ ಅಶ್ವಿನ್ ಕೇವಲ 9 ವಿಕೆಟ್ ಗಳಿಸಲು ಶಕ್ತರಾಗಿದ್ದಾರೆ. ಈ ಸರಣಿಯಲ್ಲಿ ಅಕ್ಷರ್ ಪಟೇಲ್ ಕೇವಲ 5 ವಿಕೆಟ್ ಪಡೆದಿದ್ದಾರೆ.
ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ನೀಡುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಲು ಹಾರ್ಟ್ಲಿ ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ ಕಾರಣ. ಸದ್ಯ ಉಭಯ ದೇಶಗಳ ನಡುವಿನ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಆದರೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಬಾರಿ ಇಂಗ್ಲೆಂಡ್ ತಂಡ ವಿಭಿನ್ನ ತಂತ್ರದೊಂದಿಗೆ ಮೈದಾನಕ್ಕೆ ಇಳಿದಿರುವುದನ್ನು ಒಪ್ಪಿಕೊಂಡಿದ್ದಾರೆ.
ಬೇಸ್ ಬಾಲ್ ನಲ್ಲಿ ಕೇವಲ ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಹೇಳಲಾಗದು. ಆದರೆ ಪರಿಸ್ಥಿತಿಗೆ ತಕ್ಕಂತೆ ಆಡುವ ತಿಳುವಳಿಕೆ ಇದೆ ಎಂದು ಇಂಗ್ಲೆಂಡ್ ನ್ನು ತಂಡವನ್ನು ರಾಹುಲ್ ದ್ರಾವಿಡ್ ಹೊಗಳಿದ್ದಾರೆ.
ಟೂರ್ನಿಯ ಮೂರನೇ ಪಂದ್ಯ ರಾಜ್‌ಕೋಟ್‌ದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಟೀಮ್ ಇಂಡಿಯಾ ಸಹ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಅನುಭವಿ ಆಟಗಾರರು ಮೈದಾನಕ್ಕೆ ಮರಳುವ ವಿಶ್ವಾಸವಿದೆ. ಮೂರನೇ ಟೆಸ್ಟ್ ಫೆಬ್ರವರಿ 15ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. ನಾಲ್ಕನೇ ಟೆಸ್ಟ್ ಫೆಬ್ರವರಿ 23 ರಿಂದ ರಾಂಚಿಯಲ್ಲಿ, ಐದನೇ ಟೆಸ್ಟ್ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ.