ಟೀಮ್ ಇಂಡಿಯಾ ಅದೆಷ್ಟೋ ಸ್ಟಾರ್ ಆಟಗಾರರಿಗೆ ಆಡುವ ಅವಕಾಶ ನೀಡಿದೆ. ಈಗಲೂ ನೀಡುತ್ತಲೇ ಇದೆ. ಇನ್ನು ಅವಕಾಶ ಪಡೆದ ಎಲ್ಲರೂ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ. ಆದರೆ, ಹಲವರಲ್ಲಿ ತಂಡದ ಚುಕ್ಕಾಣಿಯನ್ನು ಹಿಡಿಯುವ ಕ್ಷಮತೆ ಇರುತ್ತದೆ. ಈ ಆಟಗಾರರಿಗೆ ಸರಿಯಾದ ಅವಕಾಶಗಳು ಸಿಗದೆ, ಇವರಲ್ಲಿನ ನಾಯಕತ್ವ ಗುಣಗಳು ಮಂಕಾಗಿವೆ. ಈ ಸಾಲಿನಲ್ಲಿ ಅನೇಕ ಆಟಗಾರರು ಕಾಣಿಸಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ಲೇಟೆಸ್ಟ್ ಆಗಿ ಟೀಮ್ ಇಂಡಿಯಾ ಅನುಭವಿ ಆಟಗಾರ ಎಂಟ್ರಿ ನಿಡಿದ್ದಾರೆ.
ನಿಮಗೆ ಕಳೆದ ಬಾರಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದು ನೆನಪಿರಬೇಕು. ಈ ವೇಳೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಇವರು ಮೊದಲು ಪಂದ್ಯದ ಬಳಿಕ ಕೌಂಟುಬಿಕ ಕಾರಣಗಳನ್ನು ತಿಳಿಸಿ, ತಂಡದಿಂದ ಹೊರ ನಡೆದರು. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತ್ತು. ಆಗ ತಂಡವನ್ನು ಮುನ್ನಡೆಸುವುದು ಯಾರು ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಮ್ಯಾನೇಜ್ಮೆಂಟ್ ಮುಂದೆ ಇದರ ಬಗ್ಗೆ ಸ್ಪಷ್ಟತೆ ಇತ್ತು. ಎರಡನೇ ಪಂದ್ಯಕ್ಕೆ ಈ ಪ್ಲೇಯರ್‌ಗೆ ಚುಕ್ಕಾಣಿ ನೀಡಿದರು. ಈ ಪ್ಲೇಯರ್ ತಮ್ಮ ಕ್ಯಾಪ್ಟನ್ಸಿ ಸ್ಕಿಲ್‌ಗಳನ್ನು ತೋರಿಸಿದರು. ಅಲ್ಲದೆ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ.

ಜುಲೈ 2023 ರಿಂದ ಭಾರತದ ಪರ ಆಡುವಲ್ಲಿ ವಿಫಲರಾಗಿದ್ದಾರೆ. ಇವರ ಸ್ಥಾನದಲ್ಲಿ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡತ್ತಿದ್ದಾರೆ. ಇವರಲ್ಲಿನ ಕ್ಷಮತೆಯನ್ನು ಗುರುತಿಸುವಲ್ಲಿ ಬಿಸಿಸಿಐ ಎಡವಿತಾ ಎಂಬ ಅನುಮಾನಗಳು ಮೂಡುತ್ತಿವೆ. ಏಕೆಂದರೆ ಅಜಿಂಕ್ಯ ರಹಾನೆ ಒಬ್ಬ ಪ್ಲೇಯರ್ ಆಗಿ ಹಾಗೂ ನಾಯಕನಾಗಿ ದೇಶೀಯ ಟೂರ್ನಿಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಅಜಿಂಕ್ಯ ರಹಾನೆ ಟೀಮ್ ಇಂಡಿಯಾದಲ್ಲಿ ತಮಗೆ ಸ್ಥಾನ ಸಿಗಲಿಲ್ಲ ಎಂದು ಸುಮ್ಮನೆ ಕುಳಿತವರಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದವರು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ದಲ್ಲಿ, ರಾಜ್ಯ ತಂಡವನ್ನು ಪ್ರತಿನಿಧಿಸಿ, ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದವರು. ಕಳೆದ ವರ್ಷದ ರಣಜಿ ಟೂರ್ನಿಯಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ ಕೀರ್ತಿ ಅಜಿಂಕ್ಯ ರಹಾನೆ ಅವರಿಗೆ ಸಲ್ಲುತ್ತದೆ.

ರಹಾನೆ ಇತ್ತೀಚೆಗೆ ಇರಾನಿ ಕಪ್‌ನಲ್ಲಿ ಮತ್ತೊಮ್ಮೆ ಕ್ಯಾಪ್ಟನ್ಸಿ ಸ್ಕಿಲ್ಸ್ ತೋರಿಸಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮುಂಬೈ ತಂಡ ರೆಸ್ಟ್ ಆಫ್ ಇಂಡಿಯಾದ ವಿರುದ್ಧ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಮುಂಬೈ 27 ವರ್ಷಗಳ ಬಳಿಕ ಇರಾನಿ ಕಪ್ ವಶಪಡಿಸಿಕೊಂಡಿದೆ.
ಮುಂಬೈ ತಂಡವು 2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಸಹ ಗೆದ್ದುಕೊಂಡಿತು. ನಾಯಕನಾಗಿ, ಅವರು 2022-23ರಲ್ಲಿ ಪಶ್ಚಿಮ ವಲಯ ತಂಡದ ಪರ ದುಲೀಪ್ ಟ್ರೋಫಿ ಗೆದ್ದರು. ಇದಕ್ಕೂ ಮೊದಲು 2018 ರಲ್ಲಿ, ಅವರು ದೇವಧರ್ ಟ್ರೋಫಿಯಲ್ಲಿ ಇಂಡಿಯಾ ಸಿ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದರು.
ಟೀಮ್ ಇಂಡಿಯಾ ಪರ ಅಜಿಂಕ್ಯ ರಹಾನೆ ಬೆರಳೆಣಿಕೆ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರಬಹುದು. ಆದರೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಆರ್ಭಟಿಸಿದ್ದಾರೆ. ಯಾವುದೇ ಸನ್ನಿವೇಶವಿದ್ದರೂ, ಅದಕ್ಕೆ ಅನುಗುಣವಾಗಿ ತಂಡವನ್ನು ಮುನ್ನಡೆಸುವ ಕ್ಷಮತೆ ಇವರದ್ದಾಗಿದೆ. ರಹಾನೆ 6 ಟೆಸ್ಟ್ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಇದರಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾಗೊಂಡಿವೆ. ರಹಾನೆ ನಾಯಕತ್ವದಲ್ಲಿ ಭಾರತ ಒಂದೇ ಒಂದೂ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ರಹಾನೆ ಮೂರು ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಮೂರರಲ್ಲೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.