
ವಿಶಾಖಪಟ್ಟಣ, ಅಕ್ಟೋಬರ್ 5: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಪ್ಪನಾದ ಖುಷಿಯಲ್ಲಿದ್ದಾರೆ. ರಹಾನೆ ಪತ್ನಿ ರಾಧಿಕಾ ಧೋಪಾವ್ಕರ್ ಶನಿವಾರ (ಅಕ್ಟೋಬರ್ 5) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಹಾನೆಗೆ ಪಾಲಿಗೆ ಈ ದಿನ ವಿಶೇಷವೆನಿಸಿದೆ.
ಅಜಿಂಕ್ಯ ರಹಾನೆ 2014ರಲ್ಲಿ ತನ್ನ ಬಾಲ್ಯದ ಗೆಳತಿ ರಾಧಿಕಾ ಅವರನ್ನು ವರಿಸಿದ್ದರು. ಶಾಲಾದಿನಗಳಲ್ಲಿದ್ದಾಗ ಮೊದಲು ಭೇಟಿಯಾಗಿದ್ದ ರಹಾನೆ-ರಾಧಿಕ ಇಬ್ಬರ ಸ್ನೇಹ ಗಾಢವಾಗಿತ್ತು. ಬೆಳೆಯುತ್ತಲೇ ಈ ಸ್ನೇಹ, ಪ್ರೀತಿಯತ್ತ ವಾಲಿತ್ತು. ಅನಂತರ ಇಬ್ಬರ ಹೆತ್ತವರ ಒಪ್ಪಿಗೆ ಮೇರೆಗೆ ಹರಾನೆ-ರಾಧಿಕ ಜಂಟಿ ಜೀವನಕ್ಕೆ ಕಾಲಿರಿಸಿದ್ದರು.
ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, 4ನೇ ದಿನ, Live ಸ್ಕೋರ್‌ಕಾರ್ಡ್
ರಹಾನೆ ಅವರ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್, ಟ್ವಿಟರ್ ಮೂಲಕ ರಹಾನೆಗೆ ಶುಭ ಕೋರಿದ್ದಾರೆ. 'ಅಪ್ಪನಾಗುತ್ತಿರುವ ಹರಾನೆಗೆ ಅಭಿನಂದನೆಗಳು. ಮಗುವಿನ ತಾಯಿ ಮತ್ತು ಪುಟ್ಟು ರಾಜಕುಮಾರಿ ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇನೆ. ಬದುಕಿನ ನಿಜವಾದ ಖುಷಿ ಈಗ ಆರಂಭವಾಗಿದೆ ಅಜ್ಜು,' ಎಂದು ಭಜ್ಜಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಆಟಗಾರರಲ್ಲಿ ಎಂಎಸ್ ಧೋನಿ, ಹರ್ಭಜನ್ ಸಿಂಗ್, ಸುರೇಶ್ ರೈನಾ, ಹನುಮ ವಿಹಾರಿ ಹೆಣ್ಣು ಮಗುವಿಗೆ ಅಪ್ಪನಾದ ಸಂಭ್ರಮ ಆಚರಿಸಿದ್ದರು. ಈಗ ಈ ಖುಷಿ ರಹಾನೆಯದ್ದಾಗಿದೆ. ಸದ್ಯ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುತ್ತಿರುವ ರಹಾನೆ, ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ಬಾರಿಸಿದ್ದರು.