ಟೀಮ್ ಇಂಡಿಯಾದ ಅನುಭವಿ ಆಟಗಾರ, ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ ಅನುಭವವನ್ನು ಹೊಂದಿರುವ ಅಜಿಂಕ್ಯ ರಹಾನೆ ಅವರ ಹೆಗಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ದೊಡ್ಡ ಜವಾಬ್ದಾರಿಯನ್ನು ನೀಡಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಜಿಂಕ್ಯ ರಹಾನೆ ಅವರು ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇಷ್ಟು ದಿನಗಳಿಂದ ಎದ್ದಿದ್ದ ಊಹಾಪೋಗಳಿಗೆ ಈಗ ತೆರೆ ಬಿದ್ದಿದೆ. ಫೈನಲಿ ಐಪಿಎಲ್‌ನ 9ನೇ ತಂಡದ ನಾಯಕನ ಹೆಸರು ಘೋಷಣೆ ಆಗಿದೆ.
ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಂಡ ಕೈ ಬಿಟ್ಟಿತ್ತು. ಅಲ್ಲದೆ ಇವರಿಗೆ ಹರಾಜಿನಲ್ಲಿ ಮಣೆ ಸಹ ಹಾಕಲಿಲ್ಲ. ತಮ್ಮ ತಂಡದಲ್ಲಿದ್ದ ಯುವ ಆಟಗಾರ ವೆಂಕಟೇಶ್ ಅಯ್ಯರ್‌ಗೆ ಭಾರೀ ಹಣವನ್ನು ಹೂಡಿತು. ಆದರೆ ಯಾವುದೇ ಒಬ್ಬ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಈಗ ತನ್ನಲ್ಲೇ ಇದ್ದ ಒಬ್ಬ ಅನುಭವಿ ಆಟಗಾರನ ಹೆಗಲಿಗೆ ಕೆಕೆಆರ್ ತಂಡದ ಜವಾಬ್ದಾರಿಯನ್ನು ನೀಡಿದೆ. ಅಜಿಂಕ್ಯ ರಹಾನೆ ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.

ಅಜಿಂಕ್ಯ ರಹಾನೆ ಅವರು ಕಳೆದ ಬಾರಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಇವರನ್ನು ಉಳಿಸಿಕೊಳ್ಳುವಲ್ಲಿ ತಂಡ ವಿಫಲವಾಯಿತು. ಅಲ್ಲದೆ ಇವರು 1.50 ಕೋಟಿ ಮೂಲ ಬೆಲೆಯೊಂದಿಗೆ ಅಂಗಳಕ್ಕೆ ಇಳಿದರು. ಆದರೆ ಇವರು ಅಂದುಕೊಂಡಷ್ಟು ಹಣ ಇವರ ಜೇಬು ಸೇರಲಿಲ್ಲ. ಅಂತಿಮವಾಗಿ ಇವರು ತಮ್ಮ ಮೂಲ ಬೆಲೆಗೆ ಕೆಕೆಆರ್ ತಂಡದ ಪಾಲಾದರು. ಈಗಾಗಲೇ ದೇಶೀಯ ಸರ್ಕಿಟ್‌ನಲ್ಲಿ ಅಮೋಘ ನಾಯಕತ್ವದ ಗುಣಗಳಿಂದ ಮನೆ ಮಾತಾಗಿರುವ ಅಜಿಂಕ್ಯ ಅವರ ಅನುಭವವಕ್ಕೆ ಕೆಕೆಆರ್ ಮಣೆ ಹಾಕಿದೆ.
ಸೌದಿಯಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಅವರಿಗೆ ಭಾರೀ ಮೊತ್ತವನ್ನು ನೀಡಿತ್ತು. ಈ ವೇಳೆ ಅವರ ಮೂಖ ಬೆಲೆ 2 ಕೋಟಿ ಆಗಿತ್ತು. ಆಗಿನಿಂದಲೂ ಇವರನ್ನು ಕೊಳ್ಳಲು ಜಿದ್ದಿಗೆ ಬಿದ್ದಿದ್ದ ಕೋಲ್ಕತ್ತ ಅಂತಿಮವಾಗಿ 23.75 ಕೋಟಿ ರೂಗಳನ್ನು ನೀಡಿ ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಇಷ್ಟ ದೊಡ್ಡ ಮೊತ್ತವನ್ನು ನೀಡಿದ್ದು ಕಂಡು ಅಭಿಮಾನಿಗಳು ಇವರಿಗೆ ನಾಯಕತ್ವ ನೀಡುತ್ತಾರೆ ಎಂದು ಅಂದು ಕೊಂಡಿದ್ದರು. ಆದರೆ ಅವರ ಆಸೆ ಎಲ್ಲ ಠುಸ್ ಆಗಿದ್ದು, ಕೆಕೆಆರ್ ಮ್ಯಾನೇಜ್ಮೆಂಟ್ ಅನುಭವಿ ನಾಯಕನಿಗೆ ಮಣೆ ಹಾಕಿದೆ.
ಈಗಾಗಲೇ ರಹಾನೆ ಐಪಿಎಲ್‌ನಲ್ಲಿ ನಾಯಕತ್ವ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಇವರ ಹೆಗಲಿಗೆ ಮತ್ತೊಮ್ಮೆ ಅವಕಾಶ ಹುಡುಕಿಕೊಂಡು ಬಂದಿದೆ. ಇವರು ಐಪಿಎಲ್‌ನಲ್ಲಿ ಆಡಿದ 185 ಪಂದ್ಯಗಳಲ್ಲಿ 4642 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 30 ಅರ್ಧಶತಕಗಳು ಸೇರಿವೆ.