ಇಂಗ್ಲಿಷ್ ಕೌಂಟಿ: ಪಾದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ ಅಜಿಂಕ್ಯ ರಹಾನೆ

ನ್ಯೂಪೋರ್ಟ್, ಮೇ 23: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ನ ನ್ಯೂಪೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಕಣಕ್ಕಿಳಿದಿದ್ದ ರಹಾನೆ, ನಾಟಿಂಗ್‌ಹ್ಯಾಂಶೈರ್ ವಿರುದ್ಧ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ.
ಈ ಸಾಧನೆಯೊಂದಿಗೆ ರಹಾನೆ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಶತಕ ಬಾರಿಸಿದ ಮೂರನೇ ಭಾರತೀಯನಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಸೆಕ್ಸ್ ಪರ ಆಡಿದ್ದ ಪಿಯೂಷ್ ಚಾವ್ಲಾ ವರ್ಸೆಸ್ಟರ್‌ಶೈರ್ ವಿರುದ್ಧ ಮತ್ತು ಎಸೆಕ್ಸ್ ಪ್ರತಿನಿಧಿಸಿದ್ದ ಮುರಳಿ ವಿಜಯ್, ನಾಟಿಂಗ್‌ಹ್ಯಾಂಶೈರ್ ಎದುರು ಸೆಂಚುರಿ ಬಾರಿಸಿದ್ದರು.
ಹ್ಯಾಂಪ್‌ಶೈರ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್‌ಗೆ ಔಟಾಗಿದ್ದ ರಹಾನೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ತಾಳ್ಮೆಯ ಆಟ ಆಡಿದರು. ಒಟ್ಟು 197 ಎಸೆತಗಳಿಗೆ ರಹಾನೆ 119 ರನ್ ಗಳಿಸಿದ್ದಾರೆ. ನಾಯಕ ಸ್ಯಾಮ್ ನಾರ್ತ್‌ಈಸ್ಟ್ 133 ರನ್ ಕೊಡುಗೆಯೊಂದಿಗೆ ಹ್ಯಾಂಪ್‌ಶೈರ್ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 367 ರನ್ ಬಾರಿಸಿ ದ್ವಿತೀಯ ಇನ್ನಿಂಗ್ಸ್ ಮುಗಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹ್ಯಾಂಪ್‌ಶೈರ್ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ವೆದರ್ಲಿ 66, ಆಲಿವರ್ ಸೋಯಾಮ್ಸ್ 44, ಅನ್ಯುರಿನ್ ಡೊನಾಲ್ಡ್ 46 ರನ್‌ನೊಂದಿಗೆ 310 ರನ್ ಬಾರಿಸಿತ್ತು. ನಾಟಿಂಗ್‌ಹ್ಯಾಂಶೈರ್ ಸ್ಟೀವನ್ ಮುಲ್ಲಾನಿ 102 ರನ್‌ನೊಂದಿಗೆ 239 ಸೇರಿಸಿತು. ದ್ವಿತೀಯ ಇನ್ನಿಂಗ್ಸ್ ಆಡುತ್ತಿರುವ ನಾಟಿಂಗ್‌ಹ್ಯಾಂಶೈರ್ ಗುರುವಾರ (ಮೇ 23) 3ನೇ ದಿನದಾಟದಾಂತ್ಯಕ್ಕೆ 15 ಓವರ್‌ಗೆ 2 ವಿಕೆಟ್ ಕಳೆದು 42 ರನ್ ಬಾರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications