ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇವರು ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅನುಭವ ಸಹ ಹೊಂದಿದ್ದಾರೆ. ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಇವರು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಅಲ್ಲದೆ ಇವರಿಗೆ ಇನ್ನು ಟೀಮ್ ಇಂಡಿಯಾ ಏರಬಹುದು ಎಂಬ ನಂಬಿಕೆ ಅವರಲ್ಲಿ ಇನ್ನು ಇದೆ.
ಅಜಿಂಕ್ಯ ರಹಾನೆ ಸಂದರ್ಶನವೊಂದರಲ್ಲಿ ಟೆಸ್ಟ್‌ಗೆ ಕಂ ಬ್ಯಾಕ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ನಿಜ ಹೇಳಬೇಕೆಂದರೆ, ನಾನು ಆಯ್ಕೆದಾರರೊಂದಿಗೆ ಮಾತನಾಡಲು ಪ್ರಯತ್ನಿಸಿದೆ ಆದರೆ ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ಅಜಿಂಕ್ಯ ರಹಾನೆ ತಮ್ಮ ಟೆಸ್ಟ್ ಕಂ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ದಿನವೂ ಬೆವರು ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅಜಿಂಕ್ಯ ರಹಾನೆ ಟೀಮ್ ಇಂಡಿಯಾ 2023ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದೇ ಸಮಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದು, ಈಗಲೂ 37 ವರ್ಷದ ರಹಾನೆಗೆ ತಂಡ ಸೇರುವ ಕನಸು ಇದೆ.
ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ರಹಾನೆ, ದೇಶೀಯ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ವೇಳೆ ನಾನು ಸಹ ಆಟದತ್ತ ಗಮನ ಹರಿಸಿಸುತ್ತಿದ್ದೇನೆ. ನಾನು ಆಯ್ಕೆ ಸಮಿತಿ ಜೊತೆ ಮಾತನಾಡಲು ಬಯಸಿದ್ದೆ. ನಾನು ಟೆಸ್ಟ್ ಕ್ರಿಕೆಟ್ ಆಡಲು ಇನ್ನು ಉತ್ಸುಕನಾಗಿದ್ದೇನೆ. ಹೀಗಾಗಿ ಈಗಲೂ ನಾನು ಕ್ರಿಕೆಟ್ ಆನಂದಿಸುತ್ತಾ ಆಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಅಜಿಂಕ್ಯ ರಹಾನೆ ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಮುಂಬರು ರಣಜಿ ಟ್ರೋಫಿಯಲ್ಲಿ ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡಿ ಕಂ ಬ್ಯಾಕ್ ಮಾಡುವ ಕನಸು ರಹಾನೆ ಅವರದ್ದಾಗಿದೆ. ಇವರು ಟೀಮ್ ಇಂಡಿಯಾವನ್ನು ಹಲವು ಸರಣಿಗಳಲ್ಲಿ ಮುನ್ನಡೆಸಿದ್ದಾರೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಸರಣಿ ಚಾಂಪಿಯನ್ ಟ್ರೋಫಿಯನ್ನು ಗೆದ್ದಿತ್ತು. ಅಲ್ಲದೆ ಟೀಮ್ ಇಂಡಿಯಾ ಪರ ಹಲವು ವರ್ಷಗಳ ಕಾಲ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ ಆಟಗಾರ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ ಈಗಾಗಲೇ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 38ರ ಸರಾಸರಿಯಲ್ಲಿ 5088 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ. ಇವರು ಈ ಹಿಂದೆ ನಾನು ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನು ಆಡುವ ಕನಸು ಹೊಂದಿದ್ದಾಗಿ ತಿಳಿಸಿದ್ದರು.