
ಲಂಡನ್, ಏಪ್ರಿಲ್ 29: ವಿಶ್ವಕಪ್‌ಗಾಗಿ 15 ಜನರ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಹೆಸರಿಸಲಾಗಿದ್ದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್, ತಂಡದಿಂದ ಕೈಬಿಟ್ಟಿದೆ. ಮದ್ದು ಸೇವನೆ ಆರೋಪದಲ್ಲಿರುವ ಹೇಲ್ಸ್ ಅವರನ್ನು ತಂಡದಲ್ಲಿ ಉಳಿಸಿಕೊಂಡು ಅನಗತ್ಯ ವಿವಾದವನ್ನು ಮೇಲೆಳೆದುಕೊಳ್ಳುವ ಬದಲಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಈಸಿಬಿ), 'ಇಂಗ್ಲೆಂಡ್ ತಂಡದ ಹಿತಾಸಕ್ತಿ ಕಾಯುವ ಸಲುವಾಗಿ ಪುರುಷರ ಕ್ರಿಕೆಟ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ' ಎಂದು ತಿಳಿಸಿದೆ.
ತಂಡದ ಬಗೆಗಿನ ಉತ್ತಮ ಅಭಿಪ್ರಾಯ ಕಾಯ್ದಿರಿಸಿಕೊಳ್ಳಲು, ಅನಗತ್ಯ ಗೊಂದಲಕ್ಕೆ ದಾರಿ ಮಾಡಿಕೊಡದಿರುವ ಉದ್ದೇಶದಿಂದ ಮತ್ತು ಹೇಲ್ಸ್ ಕೈ ಬಿಟ್ಟೂ ತಂಡ ಯಶಸ್ವಿಯಾಗುವ ನಂಬಿಕೆಯಿಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ನಿಲುವು ತಾಳಿರುವುದಾಗಿ ಅದು ಹೇಳಿಕೊಂಡಿದೆ.
ಇದಕ್ಕೂ ಮುನ್ನ ಅಲೆಕ್ಸ್ ಹೇಲ್ಸ್ ರಿಕ್ರಿಯೇಶನಲ್ ಡ್ರಗ್ (ಉದ್ದೀಪನಾ ಮದ್ದು) ಸೇವಿಸಿ 21 ದಿನಗಳ ನಿಷೇಧಕ್ಕೆ ಗುರಿಯಾಗಿದ್ದರು. ಇದೇ ಕಾರಣಕ್ಕಾಗಿ ಈ ಬಾರಿ ಕೌಂಟಿ ಕ್ರಿಕೆಟ್‌ನಲ್ಲಿ ಅವರು ಆಡಬೇಕಿದ್ದ ನಾಟಿಂಗ್‌ಹ್ಯಾಮ್‌ಶೈರ್ ತಂಡದಲ್ಲಿ ಆಡಿರಲಿಲ್ಲ. ಆದರೆ ತಾನು ತಂಡದ ಪರ ಆಡದಿರುವುದು 'ವೈಯಕ್ತಿಕ ಕಾರಣದಿಂದ' ಎಂದು ಹೇಲ್ಸ್ ಹೇಳಿಕೊಂಡಿದ್ದರು.