ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ 'ಬೆನ್' ಬಲ ಅಧಿಕೃತ: ಕಿವೀಸ್ ಸರಣಿ ಮೂಲಕ ಸ್ಟಾರ್ ಕ್ರಿಕೆಟಿಗ ಮತ್ತೆ ಕಣಕ್ಕೆ
ವಿಶ್ವಕಪ್ ವಿಜೇತ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನೀಡಿರುವ ನಿವೃತ್ತಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಬೆನ್ ಸ್ಟೋಕ್ಸ್ ಆಡುವುದು ಖಚಿತವಾಗಿದೆ. ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದು ಈ ಸರಣಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಬೆನ್ ಸ್ಟೋಕ್ಸ್ ಸ್ಥಾನ ಪಡೆದುಕೊಂಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 15 ಆಟಗಾರರ ಪಡೆಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ತಂಡದಲ್ಲಿ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕನಾಗಿರುವ ಬೆನ್ ಸ್ಟೋಕ್ಸ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿಯಿಂದ ಅಧಿಕೃತವಾಗಿ ಹೊರಬಂದಂತಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದ ಬಳಿಕ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರ ಲೂಕ್ ರೈಟ್ ಮಾತನಾಡಿ ಬೆನ್ ಸ್ಟೋಕ್ಸ್ ಕಮ್‌ಬ್ಯಾಕ್‌ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ಪ್ರತಿಯೊಬ್ಬ ಅಭಿಮಾನಿಯೂ ಬೆನ್ ಸ್ಟೋಕ್ಸ್ ಮತ್ತೆ ಇಂಗ್ಲೆಂಡ್ ಏಕದಿನ ಜರ್ಸಿಯಲ್ಲಿ ಆಡಲು ಹಿಂತಿರುಗುವುದನ್ನು ನೋಡಿ ಆನಂದಿಸುತ್ತಾರೆ ಎಂಬುದು ನನಗೆ ಖಚಿತವಿದೆ" ಎಂದಿದ್ದಾರೆ ಲೂಕ್ ರೈಟ್.
ಏಕದಿನ ಕ್ರಿಕೆಟ್‌ಗೆ ನೀಡಿದ ನಿವೃತ್ತಿಯನ್ನು ವಾಪಸ್ ಪಡೆದ ಬಳಿಕ ಬೆನ್ ಸ್ಟೋಕ್ಸ್ ತಂಡಕೆ ಮತ್ತೆ ಮರಳಿದ್ದಾರೆ. ಇದರ ಜೊತೆಗೆ ಸರ್ರೆ ತಂಡದ ಅನ್‌ಕ್ಯಾಪ್‌ಡ್ ವೇಗದ ಬೌಲರ್ ಗುಸ್ ಅಟ್ಕಿನ್ಸನ್ ಕೂಡ ಇಂಗ್ಲೆಂಡ್ 15ರ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಮಾಧ್ಯಮಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಬೆನ್ ಸ್ಟೋಕ್ಸ್ ಕಳೆದ ಬೇಸಿಗೆ ಋತುವಿನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಮೂರು ಮಾದರಿಯಲ್ಲಿಯೂ ಕ್ರಿಕೆಟ್ ಆಡುವುದು ಅತಿಯಾಗಿ ಒತ್ತಡವನ್ನುಂಟು ಮಾಡುತ್ತಿರುವ ಕಾರಣದಿಂದಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬೆನ್ ಸ್ಟೋಕ್ಸ್ ತಿಳಿಸಿದ್ದರು. ಏಕದಿನ ಮಾದರಿಯಲ್ಲಿ ಶೇಕಡಾ ನೂರರಷ್ಟು ಕೊಡುಗೆ ನೀಡಲು ಸಾಧ್ಯವಾಗದಿರುವ ಕಾರಣದಿಂದಾಗಿ ಏಕದಿನ ಮಾದರಿಯಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು ಬೆನ್ ಸ್ಟೋಕ್ಸ್. ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರದ ಬಳಿಕ ಏಕದಿನ ಕ್ರಿಕೆಟ್ ಮಾದರಿಯ ಪ್ರಸ್ತುತತೆಯ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿತ್ತು ಎಂಬುದು ಗಮನಾರ್ಹ ಅಂಶ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರವಹಿಸಿದ್ದರು. ಇನ್ನು 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಹೀರೋ ಆಗಿ ಮಿಂಚಿದ್ದರು ಬೆನ್ ಸ್ಟೋಕ್ಸ್. ಆದರೆ ವರ್ಷದ ಹಿಂದೆ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿದ್ದು ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು.
ಅದಾದ ಬಳಿಕ ಏಕದಿನ ವಿಶ್ವಕಪ್‌ಗಾಗಿ ಬೆನ್ ಸ್ಟೋಕ್ಸ್ ನಿವೃತ್ತಿಯನ್ನು ವಾಪಾಸ್ ಪಡೆಯಬೇಕು ಎಂಬ ಒತ್ತಾಯಗಳು ಸಾಕಷ್ಟು ಕೇಳಿಬಂದಿತ್ತು. ಅದಕ್ಕ ಪೂರಕವಾಗಿ ಬೆನ್ ಸ್ಟೋಕ್ಸ್ ಈಗ ಏಕದಿನ ಕ್ರಿಕೆಟ್‌ಗೆ ನೀಡಿದ ನಿವೃತ್ತಿ ವಾಪಸ್ ಪಡೆದು ತಂಡಕ್ಕೆ ಮರಳಿದ್ದಾರೆ.
ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾದ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications